ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi)ಯವರು ಟ್ರಕ್ ಸವಾರಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿಯಿಂದ ಚಂಡಿಗಢ್ಗೆ ತೆರಳುತ್ತಿದ್ದ ರಾಹುಲ್ ಗಾಂಧಿ, ಹರಿಯಾಣದ ಅಂಬಾಲಾದಿಂದ ಟ್ರಕ್ ಹತ್ತಿ ಹೋಗಿದ್ದಾರೆ. ರಾತ್ರಿಯಿಡೀ ಕೆಲಸ ಮಾಡುವ ಟ್ರಕ್, ಲಾರಿ ಚಾಲಕರ ಕಷ್ಟ-ಸಮಸ್ಯೆಗಳನ್ನು ಆಲಿಸುವ ಸಲುವಾಗಿ ರಾಹುಲ್ ಗಾಂಧಿ ಹೀಗೆ ಟ್ರಕ್ನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ (Congress Party) ಹಲವು ಮುಖಂಡರು, ಕಾರ್ಯಕರ್ತರು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರು ಜನಸಾಮಾನ್ಯರ ಜತೆ ಮುಕ್ತವಾಗಿ ಬೆರೆಯುತ್ತಾರೆ. ಇತ್ತೀಚೆಗೆ ಕರ್ನಾಟಕಕ್ಕೆ ಆಗಮಿಸಿದ್ದಾಗ ಬೆಂಗಳೂರಿನಲ್ಲಿ ಅವರು ಒಬ್ಬ ಫುಡ್ ಡೆಲಿವರಿ ಹುಡುಗನೊಂದಿಗೆ ಸ್ಕೂಟರ್ನಲ್ಲಿ ಹೋಗಿದ್ದರು. ಅದಾದ ಮೇಲೆ ಅವರು ಈ ಸ್ವಿಗ್ಗಿ, ಜೊಮ್ಯಾಟೋ, ಡುಂಜೊ ಕಂಪನಿಗಳ ಈ ಡೆಲಿವರಿ ಬಾಯ್ಗಳೊಂದಿಗೆ ಸಂವಾದ-ಮಾತುಕತೆ ನಡೆಸಿದ್ದರು. ಅವರಿಗೆ ಇರುವ ಸಮಸ್ಯೆಗಳೇನು? ನಿತ್ಯ ಬದುಕಲ್ಲಿ ಏನು ಸವಾಲು ಎದುರಿಸುತ್ತಿದ್ದಾರೆ? ಎಂದೆಲ್ಲ ಪ್ರಶ್ನಿಸಿ, ಉತ್ತರ ಪಡೆದುಕೊಂಡಿದ್ದರು. ಇದೀಗ ಟ್ರಕ್ನಲ್ಲಿ ಹೋಗುವ ಮೂಲಕ ಅದರ ಚಾಲಕನ ಬಳಿ ಮಾತುಕತೆ ನಡೆಸಿದ್ದಾರೆ.
ಅವರ ಈ ನಡೆಯನ್ನು ಕಾಂಗ್ರೆಸ್ ನಾಯಕರು ಹೊಗಳುತ್ತಿದ್ದಾರೆ. ಟ್ವೀಟ್ ಮಾಡಿದ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗಢಿ ‘ರಾಹುಲ್ ಗಾಂಧಿಯವರು ಮಾತ್ರ ಹೀಗೆ ಟ್ರಕ್ ಡ್ರೈವರ್ಗಳನ್ನು ಭೇಟಿಯಾಗಿ, ಅವರ ಸಮಸ್ಯೆ ಆಲಿಸಬಲ್ಲರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಟ್ರಕ್ ಮೇಲೆ ಅವರು ಸಾಗಬಲ್ಲರು ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಅವರು ಟ್ವೀಟ್ ಮಾಡಿ ‘ರಾಹುಲ್ ಗಾಂಧಿಯವರು ಈ ದೇಶದ ಆಂತರಿಕ ಧ್ವನಿ ಕೇಳಲು ಮತ್ತು ಇಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳು, ಮಾಡುತ್ತಿರುವ ಹೋರಾಟಗಳನ್ನು ಅರ್ಥ ಮಾಡಿಕೊಳ್ಳಲು ಬಯಸಿದ್ದಾರೆ’ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಅದರಲ್ಲವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ವೇಳೆ ಸಾಮಾನ್ಯ ಜನರೊಟ್ಟಿಗೆ ಮುಕ್ತವಾಗಿ ಬೆರೆತರು. ಸಮಾಜದ ವಿವಿಧ ವರ್ಗದ ಜನರೊಂದಿಗೆ, ಅವರ ಸಮೀಪವೇ ನಿಂತು ಸಮಸ್ಯೆ ಆಲಿಸಿದರು. ವೃದ್ಧರನ್ನು, ಅಶಕ್ತರನ್ನು ಆತ್ಮೀಯವಾಗಿ ಅಪ್ಪಿಕೊಂಡಿದ್ದರು. ಈ ಭಾರತ್ ಜೋಡೋ ಯಾತ್ರೆ ಮುಗಿದ ನಂತರವೂ ಕೂಡ ತಮ್ಮ ಈ ಕಾಯಕವನ್ನು ಮುಂದುವರಿಸಿದ್ದಾರೆ.