ನವದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಹಾಲಿ ಸಂಸದ ರಾಹುಲ್ ಗಾಂಧಿ ಅವರಿಗೆ ಭಾನುವಾರ 52ನೇ ಜನ್ಮದಿನವಾಗಿದೆ. ಆದರೆ ಅಗ್ನಿಪಥ್ ಯೋಜನೆ ವಿರೋಧಿಸಿ ಭಾರಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸದಿರುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿಯವರ ಸಂದೇಶವನ್ನು ರವಾನಿಸಿದ್ದಾರೆ.
” ದೇಶದ ಯುವಜನತೆ ಆಕ್ರೋಶಿತರಾಗಿದ್ದಾರೆ. ನಾನಾ ಕಡೆಗಳಲ್ಲಿ ಅಗ್ನಿಪಥ್ ಯೋಜನೆಯನ್ನು ವಿರೋಧಿಸಲಾಗಿದೆ. ಈ ಸಂದರ್ಭ ನಾವು ಅವರು ಮತ್ತು ಅವರ ಕುಟುಂಬದ ಜತೆಗೆ ನಿಲ್ಲಬೇಕಾಗಿದೆʼʼ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
” ಭಾರತದಲ್ಲಿ ಈಗಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ಕೋಟ್ಯಂತರ ಯುವಕರು ಆಕ್ರೋಶದಲ್ಲಿರುವಾಗ ಪಕ್ಷದ ಕಾರ್ಯಕರ್ತರು ಯುವಜನರ ನೋವಿಗೆ ಸ್ಪಂದಿಸಬೇಕುʼʼ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ಹಿಂತೆಗೆದುಕೊಂಡಿದ್ದರು. ಅದೇ ರೀತಿ ಅಗ್ನಿಪಥ್ ಸ್ಕೀಮ್ ಅನ್ನೂ ಹಿಂಪಡೆಯಲಿದ್ದಾರೆ. ಈ ಮೂಲಕ ಮಾಫಿ ವೀರರಾಗಲಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ.