ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯವರು ಕರ್ನಾಟಕದ ಕೋಲಾರದಲ್ಲಿ ಜೈ ಭಾರತ್ ಸಮಾವೇಶ ಮುಗಿಸಿ, ವಾಪಸ್ ದೆಹಲಿಗೆ ತೆರಳುತ್ತಿದ್ದಂತೆ, ಹಳೇ ದೆಹಲಿಯಲ್ಲಿರುವ ಮಟಿಯಾ ಮಹಲ್ ಮಾರ್ಕೆಟ್ ಮತ್ತು ಬೆಂಗಾಳಿ ಮಾರುಕಟ್ಟೆಗೆ ಭೇಟಿ ಕೊಟ್ಟಿ, ವಿವಿಧ ಖಾದ್ಯಗಳನ್ನು ಸವಿದಿದ್ದಾರೆ. ಇದು ರಂಜಾನ್ ತಿಂಗಳಾಗಿದ್ದರಿಂದ ಈ ಪ್ರದೇಶಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿರುತ್ತದೆ. ವಿಪರೀತ ಜನಜಂಗುಳಿ ಇದ್ದು, ಹಬ್ಬದ ವಾತಾವರಣವೇ ಇರುತ್ತದೆ. ನೀಲಿ ಬಣ್ಣದ ಟಿಶರ್ಟ್ ತೊಟ್ಟ ರಾಹುಲ್ ಗಾಂಧಿ ಮಾರುಕಟ್ಟೆಯಲ್ಲೆಲ್ಲ ಓಡಾಡಿ, ತಮಗೆ ಇಷ್ಟಬಂದ ತಿಂಡಿಗಳನ್ನೆಲ್ಲ ತಿಂದಿದ್ದಾರೆ. ಆ ಫೋಟೋಗಳು ವೈರಲ್ ಆಗುತ್ತಿವೆ.
ಮಟಿಯಾ ಮಹಲ್ನಲ್ಲಿರುವ ಪ್ರಸಿದ್ಧ ಪಾನಕದ ಅಂಗಡಿಯೊಂದಕ್ಕೆ ಭೇಟಿ ನೀಡಿ ಅವರು ಕಲ್ಲಂಗಡಿ ಹಣ್ಣಿನ ಶರಬತ್ ಕುಡಿದಿದ್ದಾರೆ. ಅಲ್ಲೇ ಅಕ್ಕಪಕ್ಕದ ಅಂಗಡಿಗಳಿಗೂ ಅವರು ಭೇಟಿ ಕೊಟ್ಟಿದ್ದಾರೆ. ಬಳಿಕ ಬಂಗಾಳಿ ಮಾರ್ಕೆಟ್ನ ನಾಥು ಸ್ವೀಟ್ಸ್ನಲ್ಲಿ ಗೋಲ್ಗಪ್ಪಾ ಸವಿದಿದ್ದಾರೆ. ಇನ್ನು ರಾಹುಲ್ ಗಾಂಧಿಯವರ ಭೇಟಿ ಹೊತ್ತಲ್ಲಿ ಈ ಮಾರ್ಕೆಟ್ಗಳಲ್ಲಿ ಭರ್ಜರಿ ಜನರು ಸೇರಿದ್ದರು. ಸಣ್ಣಪುಟ್ಟ ದಾರಿಗಳೆಲ್ಲ ತುಂಬಿ ತುಳುಕುತ್ತಿದ್ದವು. ಕಾಂಗ್ರೆಸ್ ಪರ, ರಾಹುಲ್ ಗಾಂಧಿ ಪರ ಘೋಷಣೆಗಳನ್ನು ಕೂಗುತ್ತಿದ್ದರು.
2019ರಲ್ಲಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ ಕೇಸ್ನಡಿ ರಾಹುಲ್ ಗಾಂಧಿ ದೋಷಿ ಎನ್ನಿಸಿ, 2ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗೆ ಅನರ್ಹಗೊಂಡ ಬಳಿಕ ಮೊದಲು ತಮ್ಮ ಕ್ಷೇತ್ರವಾಗಿದ್ದ ಕೇರಳದ ವಯಾನಾಡ್ಗೆ ಭೇಟಿ ಕೊಟ್ಟಿದ್ದರು. ಬಳಿಕ ಕರ್ನಾಟಕದ ಕೋಲಾರಕ್ಕೆ ಏಪ್ರಿಲ್ 16ರಂದು ಆಗಮಿಸಿ, ಜೈ ಭಾರತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.