ನವದೆಹಲಿ: ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಇದೇ ಮೊದಲ ಬಾರಿಗೆ ತಾವು ಪ್ರತಿನಿಧಿಸುತ್ತಿದ್ದ ಕೇರಳದ ವಯನಾಡ (Wayanad) ಕ್ಷೇತ್ರಕ್ಕೆ ರಾಹುಲ್ ಗಾಂಧಿ (Rahul Gandhi) ಅವರು ಮಂಗಳವಾರ ಭೇಟಿ ನೀಡಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್‌ಗೆ ಸಾಥ್ ನೀಡಿದರು. ಇದೇ ವೇಳೆ, ರಾಹುಲ್ ಗಾಂಧಿ ಬೆಂಬಲಿಗರು ಕಲ್ಪೆಟ್ಟಾ ಪಟ್ಟಣದಲ್ಲಿ ಸತ್ಯಮೇವ ಜಯತೆ ಹೆಸರಿನಲ್ಲಿ ರೋಡ್ ಶೋ ಕೂಡ ನಡೆಸಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ಅವರು (ಬಿಜೆಪಿ) ನನ್ನ ಮನೆಯನ್ನು ತೆಗೆದುಕೊಳ್ಳಬಹುದು; ಜೈಲಿಗೆ ಹಾಕಬಹುದು. ಆದರೆ, ವಯನಾಡ ಜನರನ್ನು ಪ್ರತಿನಿಧಿಸುವ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ತಡೆಯಲಾರರು ಎದು ಹೇಳಿದರು.
ಸಂಸತ್ ಸದಸ್ಯ ಎಂಬುದು ಒಂದು ಟ್ಯಾಗ್. ಇದು ಒಂದು ಪೋಸ್ಟ್. ಆದ್ದರಿಂದ, ಬಿಜೆಪಿಯು ನನ್ನ ಟ್ಯಾಗ್, ಹುದ್ದೆ, ಮನೆಯನ್ನು ಕಸಿದುಕೊಳ್ಳಬಹುದು, ಮತ್ತು ಅವರು ನನ್ನನ್ನು ಜೈಲಿಗಟ್ಟಬಹುದು. ಆದರೆ ಅವರು ನಾನು ವಯನಾಡಿನ ಜನರನ್ನು ಪ್ರತಿನಿಧಿಸುವುದನ್ನು ತಡೆಯಲು ಅವರು ಸಾಧ್ಯವಿಲ್ಲ, ನನಗೆ ಆಶ್ಚರ್ಯವಾಗಿದೆ. ಇಷ್ಟು ವರ್ಷ ಕಳೆದರೂ ಬಿಜೆಪಿಗೆ ತನ್ನ ಎದುರಾಳಿಯನ್ನು ಅರ್ಥ ಮಾಡಿಕೊಂಡಿಲ್ಲ, ಎದುರಾಳಿ ಬೆದರುವುದಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ, ಪೊಲೀಸರನ್ನು ಮನೆಗೆ ಕಳುಹಿಸಿದರೆ ನಾನು ಹೆದರುತ್ತೇನೆ ಅಥವಾ ನನ್ನ ಮನೆಯನ್ನು ಕಿತ್ತುಕೊಂಡರೆ ನನಗೆ ತೊಂದರೆಯಾಗುತ್ತದೆ ಎಂದು ಅವರು ತಿಳಿದುಕೊಂಡಂತೆ ಕಾಣುತ್ತದೆ ಎಂದು ಗಾಂಧಿ ಹೇಳಿದರು.
ತಾನು ಕೆಲವು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಒತ್ತಿ ಹೇಳಿದ ರಾಹುಲ್, ಅವರಿಗೆ ನನ್ನ ಹೋರಾಟವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ತಮ್ಮ ಎದುರಾಳಿಯು ಬಗ್ಗುವುದಿಲ್ಲ, ಪೊಲೀಸರಿಗೆ ಹೆದರುವುದಿಲ್ಲ ಎದು ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.
ನಾಲ್ಕು ವರ್ಷಗಳ ಹಿಂದೆ ನಾನು ಸಂಸದನಾಗಲು ಇಲ್ಲಿಗೆ ಬಂದೆ. ನನಗೆ ಇಲ್ಲಿನ ಚುನಾವಣಾ ಪ್ರಚಾರ ವಿಭಿನ್ನವಾಗಿತ್ತು. ಸಾಮಾನ್ಯ ಚುನಾವಣಾ ಪ್ರಚಾರದಲ್ಲಿ ನೀವು ಹೋಗುತ್ತೀರಿ ಮತ್ತು ಮಾತನಾಡುತ್ತೀರಿ. ನಿಮ್ಮ ನೀತಿಗಳ ಬಗ್ಗೆ ಜನರಿಗೆ ತಿಳಿಸುತ್ತೀರಿ. ಆದರೆ, 2014ರಲ್ಲಿನ ಪ್ರಚಾರ ಬೇರೆಯದ್ದೇ ಆಗಿತ್ತು. ವಾತ್ಸಲ್ಯವಿತ್ತು ಮತ್ತು ಕೇರಳವು ನನ್ನನ್ನು ಕುಟುಂಬದ ಭಾಗವಾಗಿ ಮತ್ತು ಅವರ ಮಗನಂತೆ ಭಾವಿಸಿತು. ನಾನು ಸಾಕಷ್ಟು ಯೋಚಿಸಿದೆ, ಮತ್ತು ನಾನು ಈಗ ಕೆಲವು ವರ್ಷಗಳಿಂದ ಸಂಸದನಾಗಿದ್ದೇನೆ. ಸಂಸದ ಎಂದರೆ ಜನಪ್ರತಿನಿಧಿಯಾಗಬೇಕು, ಜನರ ಭಾವನೆಗಳು, ನೋವುಗಳು ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಹೇಳಿದರು.
ವಯನಾಡ ಕ್ಷೇತ್ರದ ಕಲ್ಪೆಟ್ಟಾ ಪಟ್ಟಣದಲ್ಲಿ ರಾಹುಲ್ ಅವರ ಸತ್ಯಮೇವ ಜಯತೆ ರೋಡ್ ಶೋ
ಇದನ್ನೂ ಓದಿ: 2019ರ ಮಾನಹಾನಿ ಕೇಸ್: ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಸೂರತ್ ಸೆಷನ್ ಕೋರ್ಟ್ ತಡೆ, ಸಂಸತ್ ಸದಸ್ಯತ್ವ ಮರಳುತ್ತಾ?
ರೋಡ್‌ಶೋದಲ್ಲಿ ಜನಸಾಗರ
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ರೋಡ್‌ಶೋಗೆ ಆಗಮಿಸಿದ್ದರು. ಕಲ್ಪೆಟ್ಟಾದಲ್ಲಿ ಜನಸಾಗರವೇ ನೆರೆದಿತ್ತು. ಭಾರತ ಧ್ವಜಗಳನ್ನು ಹಿಡಿದು ಕಾರ್ಯಕರ್ತರು ಭಾಗವಹಿಸಿದ್ದರು. ಗಾಂಧಿ ಅವರು ತಮ್ಮ ಸಹೋದರಿ ಮತ್ತು ಕೇರಳದ ಪಕ್ಷದ ಹಿರಿಯ ನಾಯಕರೊಂದಿಗೆ ಟ್ರಕ್‌ನಲ್ಲಿ ಸಾರ್ವಜನಿಕ ಸಭೆಯ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಅವರನ್ನು ಸ್ವಾಗತಿಸಲು ಎಲ್ಲಾ ವಯೋಮಾನದ ಜನರು ರಸ್ತೆಬದಿಯಲ್ಲಿ ನಿಂತಿದ್ದರು.