Site icon Vistara News

ರಾಹುಲ್ ಗಾಂಧಿ ವಾಟ್ಸಾಪ್‌ ಚಾನೆಲ್‌ ಆರಂಭವಾದ ಮೊದಲ ದಿನವೇ 42 ಲಕ್ಷ ಸದಸ್ಯರು!

Rahul Gandhi WhatsApp channel got 42 lakh members on the first day of its launch

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ನ ಹೊಸ ಫೀಚರ್ ವಾಟ್ಸಾಪ್‌ ಚಾನೆಲ್ (WhatsApp Channel) ಭಾರೀ ಜನಪ್ರಿಯವಾಗುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಚಾನೆಲ್ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳು ಕೂಡ ಹೊರತಲ್ಲ. ಪ್ರಧಾನಿ ನರೇಂದ್ರ ಮೋದಿಯಿಂದ (PM Narendra Modi) ಹಿಡಿದು ಪ್ರಮುಖ ರಾಜಕಾರಣಿಗಳು ವಾಟ್ಸಾಪ್ ಚಾನೆಲ್ ಸೃಷ್ಟಿಸಿಕೊಂಡಿದ್ದಾರೆ. ಈ ಪಟ್ಟಿಗೆ ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರೂ ಎಂಟ್ರಿ ಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಜನರೊಂದಿಗೆ ಸಂಪರ್ಕ ಬೆಸೆಯಲು ಅವರು ವಾಟ್ಸಾಪ್ ಚಾನೆಲ್ ಆರಂಭಿಸಿದ್ದಾರೆ. ಚಾನೆಲ್ ಆರಂಭವಾದ ಮೊದಲ ದಿನವೇ 42 ಲಕ್ಷ ಜನರು ಸೇರ್ಪಡೆಯಾಗಿದ್ದಾರೆ ಎಂದು ದಿಲ್ಲಿ ಕಾಂಗ್ರೆಸ್ ಘಟಕವು ಹೇಳಿದೆ(Delhi Congress).

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಬುಧವಾರ ಗಾಂಧಿಯವರ ವಾಟ್ಸಾಪ್ ಚಾನೆಲ್ ಅನ್ನು ಪ್ರಾರಂಭಿಸಿದರು. ಅರವಿಂದರ್ ಸಿಂಗ್ ಲವ್ಲಿ ಅವರು ರಾಹುಲ್ ಗಾಂಧಿ ಚಾನೆಲ್‌ನ ಮೊದಲ ಚಂದಾದಾರಾದರು. ಬಳಿಕ ಚಾನೆಲ್ ಆರಂಭವಾದ ಒಂದು ದಿನದಲ್ಲಿ 42 ಲಕ್ಷ ಜನರು ಈಗಾಗಲೇ ಸೇರಿದ್ದಾರೆ ಎಂದು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಹೇಳಿದ್ದಾರೆ.

ಡಿಪಿಸಿಸಿ ಕಚೇರಿಯಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಚಾನೆಲ್ ಆರಂಭಿಸಲಾಯಿತು. ಇದನ್ನು ಔಪಚಾರಿಕವಾಗಿ ಆರಂಭಿಸಿದ ಮೊದಲ ರಾಜ್ಯ ಕಾಂಗ್ರೆಸ್ ಡಿಪಿಸಿಸಿ ಎಂದು ಅವರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಲ್ಲಿ ನಂಬಿಕೆ ಇರುವವರು ನೇರವಾಗಿಯೇ ರಾಹುಲ್ ಗಾಂಧಿ ಅವರ ಪೋಸ್ಟ್‌ಗಳನ್ನು ವಾಟ್ಸಪ್ ಚಾನೆಲ್ ಮೂಲಕ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಮತ್ತು ಅದರ ಮಿತ್ರ ಪಕ್ಷಗಳು ಸುಳ್ಳು ಸುದ್ದಿಗಳನ್ನು ಹರಡಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಆದರೆ, ರಾಹುಲ್ ಗಾಂಧಿ ಅವರು ವಾಟ್ಸಾಪ್ ಚಾನೆಲ್ ಯಾವುದೇ ಪರಿಣಾಮ ಮತ್ತು ಹೆದರಿಕೆ ಇಲ್ಲದೇ ಸತ್ಯವನ್ನೇ ಹೇಳಲಿದೆ ಎಂದು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ವಿವಿಧ ಚಟುವಟಿಕೆಗಳಿಗೆ ನೇರ ಪ್ರವೇಶ ಪಡೆಯಲು ಸಾರ್ವಜನಿಕರು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳಂತಹ ನಾಗರಿಕ ಸಂಘಟನೆಗಳ ಸದಸ್ಯರು ಚಾನಲ್‌ಗೆ ಸೇರಬಹುದು ಎಂದು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಹೇಳಿದ್ದಾರೆ.

ಮೋದಿ ಅಪಶಕುನ, ಜೇಬುಗಳ್ಳ ಎಂದ ರಾಹುಲ್‌ಗೆ ನೋಟಿಸ್

ರಾಜಸ್ಥಾನದ (Rajasthan Election) ಚುನಾವಣಾ ಪ್ರಚಾರಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಜೇಬುಗಳ್ಳ (Pickpocket) ಮತ್ತು ಅಶಕುನ (bad omen) ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರಿಗೆ ಚುನಾವಣಾ ಆಯೋಗವು (election Commission) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ(Show Cause Notice). ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿಯು ಆಯೋಗಕ್ಕೆ ದೂರು ನೀಡಿತ್ತು.

ರಾಹುಲ್ ಗಾಂಧಿ ಹೇಳಿದ್ದೇನು?

2023ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್​ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದರು. ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪಂದ್ಯವನ್ನು ಸೋಲುವಂತೆ ಮಾಡಿದ್ದು “ಪನೌತಿ” (ಕೆಟ್ಟ ಶಕುನ) ಎಂದು ರಾಹುಲ್​ ಹೇಳಿದ್ದಾರೆ.

ಪನೌತಿ… ಪನೌತಿ… ಪನೌತಿ… (ಅಪ ಶಕುನ, ಅಪಶಕುನ, ಅಪಶಕುನ). ನಮ್ಮ ತಂಡದ ಆಟಗಾರರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು ಆದರೆ ಅಪಶಕಮು ಅವರನ್ನು ಸೋಲುವಂತೆ ಮಾಡಿದರು … ಈ ವಿಷಯ ದೇಶದ ಜನರಿಗೆ ತಿಳಿದಿದೆ” ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದೆ.

ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಮೋದಿ ಮತ್ತು ಅಮಿತ್ ಶಾ ಕ್ರೀಡಾಂಗಣಕ್ಕೆ ಹೋಗಿದ್ದರು. ಆದಾಗ್ಯೂ, ಭಾರತದ ಸೋಲಿನ ನಂತರ, ಮೋದಿ ತಮ್ಮ ಡ್ರೆಸ್ಸಿಂಗ್ ಕೋಣೆಯಲ್ಲಿ ತಂಡದ ಸದಸ್ಯರನ್ನು ಸಂತೈಸುತ್ತಿರುವುದನ್ನು ಕಾಣಬಹುದು. ಕ್ರಿಕೆಟಿಗರೊಂದಿಗಿನ ಅವರ ಸಂವಾದದ ವೀಡಿಯೊಗಳು ವೈರಲ್ ಆಗಿವೆ.

ಮೋದಿ ಜೇಬುಗಳ್ಳ ಅಂದಿದ್ದ ರಾಹುಲ್

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಜೇಬುಗಳ್ಳರಿಗೆ ಹೋಲಿಸಿದ್ದರು. ”ಜೇಬುಗಳ್ಳ ಎಂದಿಗೂ ಒಬ್ಬನೇ ಬರುವುದಿಲ್ಲ. ಅವರು ಮೂರು ಜನರು ಇರ್ತಾರೆ. ಒಬ್ಬ ಎದುರಿಗೆ ಬರ್ತಾನೆ, ಮತ್ತೊಬ್ಬ ಹಿಂದಿನಿಂದ ಬರ್ತಾನೆ. ಇನ್ನೊಬ್ಬ ದೂರದಲ್ಲಿರುತ್ತಾನೆ.. ಪ್ರಧಾನಿ ಮೋದಿ ಅವರದ್ದು ನಿಮ್ಮ ಗಮನವನ್ನು ಬೇರೇಡೆಗೆ ಸೆಳೆಯುವುದಾಗಿದೆ. ಅವರು ಟಿವಿಯಲ್ಲಿ ಬರುತ್ತಾರೆ ಮತ್ತು ಹಿಂದೂ-ಮುಸ್ಲಿಮ್, ನೋಟು ಅಮಾನ್ಯೀಕರಣ, ಜಿಎಸ್‌ಟಿ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾರ್ವಜನಿಕರ ಗಮನವನ್ನು ಬೇರೇಡೆ ಸೆಳೆಯುತ್ತಾರೆ. ಈ ಮಧ್ಯೆ, ಅದಾನಿ ಹಿಂದಿನಿಂದ ಬಂದು ನಿಮ್ಮ ದುಡ್ಡು ಹೊಡ್ಕೊಂಡು ಹೋಗುತ್ತಾರೆ” ಎಂದು ಟೀಕಿಸಿದ್ದರು.

ಈ ಸುದ್ದಿಯನ್ನೂ ಓದಿ: PM Narendra Modi: ರಾಹುಲ್ ಗಾಂಧಿ ಮೂರ್ಖರ ಸರದಾರ! ಪಿಎಂ ನರೇಂದ್ರ ಮೋದಿ ವಾಗ್ದಾಳಿ

Exit mobile version