Site icon Vistara News

NEET UG 2024: ಅಧಿವೇಶನದಲ್ಲಿ ‘ನೀಟ್‌’ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ; ಪ್ರತ್ಯುತ್ತರ ಕೊಟ್ಟ ಕೇಂದ್ರ ಸಚಿವ

NEET UG 2024

Rahul Gandhi's NEET blame game barb at Education Minister, his fiery counter

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ನೀಟ್‌ ಪರೀಕ್ಷೆ (NEET UG 2024) ಅಕ್ರಮದ ಕುರಿತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಂಸತ್‌ ಬಜೆಟ್‌ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಸೋಮವಾರದಿಂದ ಬಜೆಟ್‌ ಅಧಿವೇಶನ (Union Budget Session 2024) ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಲೇ ರಾಹುಲ್‌ ಗಾಂಧಿ ಅವರು ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಪ್ರಸ್ತಾಪಿಸಿದರು. ಅಖಿಲೇಶ್‌ ಯಾದವ್‌ ಅವರು ಕೂಡ, ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕುಟುಕಿದರು. ಇದಕ್ಕೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ (Dharmendra Pradhan) ಅವರು ಪ್ರತ್ಯುತ್ತರ ನೀಡಿದರು. ಇದೇ ವೇಳೆ ಆರೋಪ-ಪ್ರತ್ಯಾರೋಪಗಳೂ ನಡೆದವು.

ರಾಹುಲ್‌ ಗಾಂಧಿ ಹೇಳಿದ್ದೇನು?

“ದೇಶಾದ್ಯಂತ ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಗಂಭೀರ ಸಮಸ್ಯೆ ಇದೆ ಎಂಬುದು ದೃಢವಾಗಿದೆ. ಇದು ನೀಟ್‌ ಮಾತ್ರವಲ್ಲ, ಎಲ್ಲ ಪ್ರಮುಖ ಪರೀಕ್ಷೆಗಳ ವ್ಯವಸ್ಥೆಯಲ್ಲೂ ಲೋಪದೋಷವಿದೆ. ಆದರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ತಮ್ಮೊಬ್ಬರನ್ನು ಬಿಟ್ಟು ಎಲ್ಲರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ, ಯಾವ ಮೂಲಭೂತ ಸಮಸ್ಯೆಯು ವಿದ್ಯಾರ್ಥಿಗಳನ್ನು ಕಾಡುತ್ತಿದೆ ಎಂಬುದೇ ಧರ್ಮೇಂದ್ರ ಪ್ರಧಾನ್‌ ಅವರಿಗೆ ಅರ್ಥವಾಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ದೇಶದ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಇದರಿಂದ ತೊಂದರೆಯಾಗುತ್ತಿದೆ” ಎಂದು ಹೇಳಿದರು.

ಧರ್ಮೇಂದ್ರ ಪ್ರಧಾನ್‌ ಪ್ರತ್ಯುತ್ತರ

ರಾಹುಲ್‌ ಗಾಂಧಿ ಆರೋಪಗಳಿಗೆ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಪ್ರತ್ಯುತ್ತರ ನೀಡಿದರು. “ಒಂದು ಸುಳ್ಳನ್ನು ಪದೇಪದೆ ಹೇಳಿದರೆ ಅದು ಸತ್ಯವಾಗುವುದಿಲ್ಲ. ಕಳೆದ 7 ವರ್ಷಗಳಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಸಾಕ್ಷ್ಯಗಳೇ ಇಲ್ಲ. ನೀಟ್‌ ಪ್ರಕರಣವು ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಸುಮಾರು 240ಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ಜವಾಬ್ದಾರಿಯಿಂದ ನಡೆಸಲಾಗಿದೆ ಎಂಬುದಾಗಿ ನಾನು ಸ್ಪಷ್ಟಪಡಿಸುತ್ತೇನೆ” ಎಂದು ಹೇಳಿದರು.

ಏನಿದು ಪ್ರಕರಣ?

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ಇದನ್ನೂ ಓದಿ: NEET UG 2024: ನೀಟ್‌ ಅಕ್ರಮ; ನಾಲ್ವರು ಏಮ್ಸ್‌ ವಿದ್ಯಾರ್ಥಿಗಳು ಸಿಬಿಐ ಬಲೆಗೆ

Exit mobile version