ನವದೆಹಲಿ: ಹಿರಿಯ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್ (Senior Officer Rahul Navin) ಅವರನ್ನು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯದ ಉಸ್ತುವಾರಿ ನಿರ್ದೇಶಕರನ್ನಾಗಿ (in-charge director of Enforcement Directorate) ಶುಕ್ರವಾರ ನೇಮಕ ಮಾಡಿದೆ. ಪೂರ್ಣ ಪ್ರಮಾಣದ ನಿರ್ದೇಶಕರ ನೇಮಕವಾಗೋವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಸರ್ಕಾರವು (Central Government) ತಿಳಿಸಿದೆ. 1984ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ (ಹಾಲಿ ನಿರ್ದೇಶಕ) ಅವರ ಬದಲಿಗೆ 1993 ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್ ಇ ಡಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜಾರಿ ನಿರ್ದೇಶಾನಲಯದ ನಿರ್ದೇಶಕ ಹುದ್ದೆಗೇರಿದ ಅತ್ಯಂತ ಹಿರಿಯ ಅಧಿಕಾರಿ ಎಂಬ ಖ್ಯಾತಿಗೆ ರಾಹುಲ್ ನವೀನ್ ಅವರಿಗಂಟಿದೆ. ನವೀನ್ ಅವರು ಜಾರಿ ನಿರ್ದೇಶಾನಲಯದ ಪ್ರಧಾನ ಕಚೇರಿಯ ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Supreme Court: ಸೆ.15ರವರೆಗೂ ಸಂಜಯ್ ಕುಮಾರ್ ಮಿಶ್ರಾ ಇ.ಡಿ ಡೈರೆಕ್ಟರ್! ‘ರಾಷ್ಟ್ರೀಯ ಹಿತಾಸಕ್ತಿ’ಗಾಗಿ ಮುಂದುವರಿಕೆ
ಸುಪ್ರೀಂ ಕೋರ್ಟ್ ಆದೇಶ
ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಜುಲೈ ತಿಂಗಳಲ್ಲಿ ತೀರ್ಪು ನೀಡಿ, ಹಾಲಿ ನಿರ್ದೇಶಕರ ಅಧಿಕಾರವಧಿಯನ್ನು ವಿಸ್ತರಿಸುವಂತಿಲ್ಲ ಹೇಳಿತ್ತಲ್ಲದೇ, ಸೆಪ್ಟೆಂಬರ್ 15ರೊಳಗೆ ಹೊಸ ನಿರ್ದೇಶಕರನ್ನು ನೇಮಕ ಮಾಡುವಂತೆ ತಿಳಿಸಿತ್ತು.
ಮಿಶ್ರಾ ಅವರು ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಪ್ರತಿ ಬಾರಿಯೂ ಒಂದು ವರ್ಷಕ್ಕೆ ಸೇವಾ ವಿಸ್ತರಣೆಯನ್ನು ನೀಡುವ ಕೇಂದ್ರದ ಎರಡು ಅಧಿಸೂಚನೆಗಳನ್ನು “ಕಾನೂನುಬಾಹಿರ” ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಹೇಳಿತ್ತು. ಆದರೆ, ಕೇಂದ್ರ ಸರ್ಕಾರವು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಅಲ್ಲದೇ, ಅವರ ಅಧಿಕಾರಾವಧಿಯನ್ನು ಮುಂದುವರಿಸುವ ತುರ್ತು ಬಗ್ಗೆ ಹೇಳಿತ್ತು. ಅಂತಿಮವಾಗಿ ಸೆಪ್ಟೆಂಬರ್ 15ರ ನಂತರ ಮತ್ತೆ ವಿಸ್ತರಣೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.