Site icon Vistara News

Rahul Gandhi : ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣದ ಭರವಸೆ ನೀಡಿದ ರಾಹುಲ್

Rahul Gandhi

ನವದೆಹಲಿ: ಛತ್ತೀಸ್​ಗಢದ ಕೊಂಡಗಾಂವ್​ನಲ್ಲಿ ಶನಿವಾರ ನಡೆದ ಕಾಂಗ್ರೆಸ್​ನ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ರಾಹುಲ್ ಗಾಂಧಿ (Rahul Gandhi). ಉಚಿತ ಶಿಕ್ಷಣ ಮತ್ತು ಸಮಾಜದ ವಿವಿಧ ವರ್ಗಗಳಿಗೆ ಬೆಂಬಲ ಸೇರಿದಂತೆ ಸರಣಿ ಭರವಸೆಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜೀವ್ ಗಾಂಧಿ ಪ್ರೋತ್ಸಾಹನ್ ಯೋಜನೆಯಡಿ ತೆಂಡು ಪಟ್ಟಾ (ಬೀಡಿ ಎಲೆಗಳು) ಬೆಲೆಯನ್ನು 4,000 ರೂ.ಗೆ ಹೆಚ್ಚಿಸಲು ಮತ್ತು ಇತರ ಸಣ್ಣ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು 10 ರೂ.ಗೆ ಹೆಚ್ಚಿಸುವುದಾಗಿಯೂ ಅವರು ಘೋಷಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಭಾನುಪ್ರತಾಪ್​ಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಛತ್ತೀಸ್​ಗಢದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಶುವಿಹಾರ (ಕೆಜಿ) ನಿಂದ ಸ್ನಾತಕೋತ್ತರ (ಪಿಜಿ) ಹಂತದವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

ಛತ್ತೀಸ್​ಗಢ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ. ಆ 20 ಸ್ಥಾನಗಳಲ್ಲಿ ಭಾನುಪ್ರತಾಪ್​ಪುರ ಕ್ಷೇತ್ರವೂ ಒಂದು.

“ನಾವು ‘ಕೆಜಿಯಿಂದ ಪಿಜಿ’ ಯವರೆಗೆ ಎಂದು ಕರೆಯುವ ಮಹತ್ವದ ಉಪಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಶಿಶುವಿಹಾರದಿಂದ ಸ್ನಾತಕೋತ್ತರ ಪದವಿಯವರೆಗೆ, ಸರ್ಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು” ಎಂದು ಗಾಂಧಿ ಹೇಳಿದರು.

ಬುಡಕಟ್ಟು ಜನರಿಗೆ ಲಾಭ

ತೆಂಡು ಎಲೆ ಸಂಗ್ರಾಹಕರ ನೇರ ನಗದು ಲಾಭದ ಹೆಚ್ಚಳವು ಬುಡಕಟ್ಟು ಪ್ರಾಬಲ್ಯದ ಬಸ್ತಾರ್ ಪ್ರದೇಶದಲ್ಲಿ ಗಣನೀಯ ಮಹತ್ವವನ್ನು ಹೊಂದಿದೆ, ಅಲ್ಲಿ ತೆಂಡು ಎಲೆಗಳ ಸಂಗ್ರಹವು ಜೀವನೋಪಾಯದ ಪ್ರಮುಖ ಮೂಲವಾಗಿದೆ.

ಈ ಸುದ್ದಿಯನ್ನೂ ಓದಿ : Assembly Election : ರಾಜಸ್ಥಾನದಲ್ಲಿ ಆಪರೇಷನ್ ಕಮಲ, ಕಾಂಗ್ರೆಸ್​ ಮೂವರು ಹಿರಿಯ ಮುಖಂಡರು ಬಿಜೆಪಿಗೆ

ಜನಸಮೂಹವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜಾತಿ ಗಣತಿ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಮತ್ತೊಮ್ಮೆ ಪ್ರಶ್ನಿಸಿದರು. “ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗ) ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಅವರು ಜಾತಿ ಜನಗಣತಿಯ ಬಗ್ಗೆ ಏಕೆ ಹಿಂಜರಿಯುತ್ತಾರೆ ಎಂದು ಪ್ರಶ್ನಿಸಿದ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿ ಜನಗಣತಿ ನಡೆಸುಸುತ್ತೇವೆ” ಎಂದು ಅವರು ಹೇಳಿದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಬಿಜೆಪಿ ಮುಖ್ಯವಾಗಿ ಆಯ್ದ ಕೆಲವು ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, “ಕಾಂಗ್ರೆಸ್ ರೈತರು, ದಲಿತರು, ಕಾರ್ಮಿಕರು ಮತ್ತು ಆದಿವಾಸಿಗಳ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ” ಎಂದು ಹೇಳಿದರು.

ಆದಿವಾಸಿಗಳಿಗೆ ಅಪಮಾನ

ಭಾಷೆ ಮತ್ತು ಅಸ್ಮಿತೆಯ ಮಹತ್ವವನ್ನು ಮತ್ತಷ್ಟು ಒತ್ತಿ ಹೇಳಿದ ಅವರು, ಬುಡಕಟ್ಟು ಜನಾಂಗದವರಿಗೆ ‘ಆದಿವಾಸಿ’ ಎಂಬ ಪದದ ಬದಲು ‘ವನವಾಸಿ’ ಎಂಬ ಪದವನ್ನು ಬಿಜೆಪಿ ಬಳಸುತ್ತಿರುವುದನ್ನು ರಾಹುಲ್​ ಟೀಕಿಸಿದರು. ಇದು ಆದಿವಾಸಿಗಳಿಗೆ ಮಾಡಿದ ಅವಮಾನ ಮತ್ತು ಅವರ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಯ ಮೇಲಿನ ದಾಳಿ ಎಂದು ಅವರು ಬಣ್ಣಿಸಿದ್ದಾರೆ.

ರಾಹುಲ್ ಗಾಂಧಿ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಮುಖ್ಯ ವಕ್ತಾರ ಅಜಯ್ ಚಂದರ್ಕರ್, “ಕಾಂಗ್ರೆಸ್ ತನ್ನ ಸುಳ್ಳು ಭರವಸೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ಚುನಾವಣೆಯಲ್ಲಿ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದ್ದರು. ರಾಹುಲ್ ಗಾಂಧಿ ಮೊದಲು ತಮ್ಮ ಸರ್ಕಾರ ಈ ಹಿಂದೆ ನೀಡಿದ ಭರವಸೆಗಳನ್ನು ಪರಿಶೀಲಿಸಬೇಕು. ಕಾಂಗ್ರೆಸ್ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

Exit mobile version