ನವ ದೆಹಲಿ: ಐದು ಸುತ್ತುಗಳ ಇ.ಡಿ. ವಿಚಾರಣೆ ಎದುರಿಸಿದ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ʼಅದೇನೂ ಮಹಾನ್ ವಿಷಯ ಅಲ್ಲವೇ ಅಲ್ಲʼ ಎಂಬರ್ಥದಲ್ಲಿ ಮಾತನಾಡಿದ್ದರು. ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಅವರು, ʼನಾನು ಸತತವಾಗಿ 10-12 ತಾಸು ಕುಳಿತು ವಿಚಾರಣೆ ಎದುರಿಸಿದ್ದನ್ನು ನೋಡಿ ಇ.ಡಿ. ಅಧಿಕಾರಿಗಳೇ ಆಶ್ಚರ್ಯ -ಖುಷಿ ವ್ಯಕ್ತಪಡಿಸಿದ್ದರು. ನಿಮ್ಮ ಶಕ್ತಿ-ತಾಳ್ಮೆಯ ಗುಟ್ಟೇನು ಎಂದು ಕೇಳಿದ್ದರು. ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಅವರಿಗೂ ಗೊತ್ತಾಗಿದೆʼ ಎಂದೂ ತಿಳಿಸಿದ್ದರು. ಈ ಮೂಲಕ ಇಷ್ಟೆಲ್ಲ ಸುತ್ತಿನ ಇ.ಡಿ. ವಿಚಾರಣೆ ಎದುರಿಸದರೂ ನನಗೇನೂ ಬಳಲಿಕೆ ಆಗಲಿಲ್ಲ ಎಂದಿದ್ದರು.
ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ ಬೆನ್ನಲ್ಲೇ ಇ.ಡಿ. ಮೂಲಗಳಿಂದ ಇನ್ನೊಂದು ಬಗೆಯ ಮಾಹಿತಿ ಹೊರಬಿದ್ದಿದೆ. ʼವಿಚಾರಣೆ ವೇಳೆ ರಾಹುಲ್ ಗಾಂಧಿ ಶೇ.20ರಷ್ಟು ಪ್ರಶ್ನೆಗೆಳಿಗೆ ಉತ್ತರಿಸಲಿಲ್ಲ. ನನಗೆ ತುಂಬ ಬಳಲಿಕೆ-ಸುಸ್ತಾಗುತ್ತಿದೆ ಎಂದೇ ಹೇಳುತ್ತಿದ್ದರುʼ ಎಂಬುದಾಗಿ ತಿಳಿಸಿದೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿ ವಿಚಾರಣೆ ಅಷ್ಟು ದೀರ್ಘಾವಧಿ ತೆಗೆದುಕೊಂಡಿದ್ಯಾಕೆ ಎಂಬುದಕ್ಕೂ ಕಾರಣ ಹೇಳಿದ್ದಾರೆ.
ಇದನ್ನೂ ಓದಿ: ಜುಲೈ ಕೊನೆಯಲ್ಲಿ ಯಾವಾಗಲಾದರೂ ಬನ್ನಿ ಸಾಕು; ಸೋನಿಯಾ ಗಾಂಧಿ ಮನವಿಗೆ ಇ ಡಿ ಸ್ಪಂದನೆ
ʼರಾಹುಲ್ ಗಾಂಧಿ ಒಂದು ಪ್ರಶ್ನೆಗೆ ಮೊದಲು ಒಂದು ಸಲ ಉತ್ತರಿಸುತ್ತಾರೆ. ಅದನ್ನೇ ಮತ್ತೊಮ್ಮೇ ಬೇರೆ ರೀತಿ ಕೇಳಿದರೆ ಮೊದಲು ಕೊಟ್ಟ ಉತ್ತರಕ್ಕಿಂತ ವಿಭಿನ್ನವಾಗಿ ಉತ್ತರಿಸುತ್ತಾರೆ. ತಾಳೆಯಾಗುತ್ತಿಲ್ಲ ಎಂದಾದಾಗ ಆ ಎರಡೂ ಉತ್ತರಗಳನ್ನು ಅವರೇ ಪರಿಶೀಲಿಸಿಕೊಳ್ಳಲು ತುಂಬ ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದರು. ತಮ್ಮದೇ ಪ್ರತಿಕ್ರಿಯೆಗಳ ವಿಶ್ಲೇಷಣೆಗೆ ಅವರಿಗೆ ತುಂಬ ಟೈಂ ಬೇಕಾಗುತ್ತಿತ್ತು. ಹೀಗಾಗಿ ಅವರು ಬೆಳಗ್ಗೆ 11ಗಂಟೆಗೆ ಇ.ಡಿ. ಕಚೇರಿಗೆ ಬಂದರೆ ವಾಪಸ್ ಹೋಗಲು ರಾತ್ರಿ ೧೧ಗಂಟೆಯಾಗುತ್ತಿತ್ತುʼ ಎಂದು ಇ.ಡಿ ಮೂಲಗಳು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ʼಇ ಡಿ ವಿಷಯ ಬಿಡಿ, ಅಗ್ನಿಪಥ್ ಹೋರಾಟಕ್ಕೆ ಸಜ್ಜಾಗಿʼ; ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಕರೆ