Site icon Vistara News

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಲು ಅಲ್ಲಿನವರೇ ಕೇಳುತ್ತಿದ್ದಾರೆಂದ ಕೆಸಿಆರ್; ವಿವಾದದ ಮೂಲ ಬಿಜೆಪಿ ಶಾಸಕ!

cm k chandrashekar rao

ತೆಲಂಗಾಣ: ‘ಕರ್ನಾಟಕದ ರಾಯಚೂರಿನ ಜನರು ತಮ್ಮ ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸುವಂತೆ (Raichur to be merged with Telangana) ಒತ್ತಾಯ ಮಾಡುತ್ತಿದ್ದಾರೆ’ ಎಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ವಿವಾದದ ಕಿಡಿ ಹೊತ್ತಿಸಿದ್ದಾರೆ. ಆದರೆ ಅವರು ಈ ಹೇಳಿಕೆ ನೀಡಲು, ಕರ್ನಾಟಕ ಬಿಜೆಪಿ ಶಾಸಕನೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.

2016ರಲ್ಲಿ ತೆಲಂಗಾಣದ ನೈಋತ್ಯದಲ್ಲಿ ರಚನೆಯಾಗಿರುವ ಜಿಲ್ಲೆ ವಿಕಾರಾಬಾದ್​​ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿ ‘ ಈ ವಿಕಾರಾಬಾದ್​​ನ ತಂದುರ್​ ನಗರಕ್ಕೆ ಕರ್ನಾಟಕದ ರಾಯಚೂರು ಹತ್ತಿರ. ಅಲ್ಲಿನ ಜನರೀಗ ತೆಲಂಗಾಣದಲ್ಲಿ ನಮ್ಮ ಟಿಆರ್​ಎಸ್​ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಒಂದೋ ಕರ್ನಾಟಕದಲ್ಲಿಯೂ ಅದೇ ಮಾದರಿಯ ಸ್ಕೀಮ್​​ಗಳು ಬೇಕು, ಇಲ್ಲವೇ ನಮ್ಮನ್ನೂ ತೆಲಂಗಾಣಕ್ಕೇ ಸೇರಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಿಷನ್​ ಭಗೀರಥ, ಗರ್ಭಿಣಿಯರು, ಬಾಣಂತಿಯರಿಗಾಗಿ ನೀಡಲಾಗುವ ಕೆಸಿಆರ್​ ಕಿಟ್​, ಉಚಿತ ವಿದ್ಯುತ್ ಮತ್ತಿತರ ಯೋಜನೆಗಳನ್ನು ಉಲ್ಲೇಖಿಸಿ ಕೆಸಿಆರ್​ ಈ ಹೇಳಿಕೆ ನೀಡಿದ್ದಾರೆ.

ಕಲೆಕ್ಟರೇಟ್​ ಕಾಂಪ್ಲೆಕ್ಸ್​ ಉದ್ಘಾಟಿಸಿ, ದೊಡ್ಡ ಮಟ್ಟದ ಸಾರ್ವಜನಿಕ ಸಭೆಯನ್ನು ಮಾತನಾಡಿದ ಕೆ. ಚಂದ್ರ ಶೇಖರ್​ ರಾವ್​, ‘ಚುನಾವಣೆಗಳಲ್ಲಿ ತುಂಬ ಜಾಣತನದಿಂದ ಆಯ್ಕೆ ಮಾಡಬೇಕು. ಬಿಜೆಪಿಯ ಬಾವುಟಗಳನ್ನು ನೋಡಿ ಮೋಸ ಹೋಗಬೇಡಿ’ ಎಂದು ಕರೆ ನೀಡಿದರು. ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಮುನುಗೋಡೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾಗೋಪಾಲ ರೆಡ್ಡಿ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಶೀಘ್ರವೇ ಉಪಚುನಾವಣೆಯೂ ನಡೆಯಲಿದೆ. ಈ ಎಲ್ಲ ದೃಷ್ಟಿಯಿಂದ ಚಂದ್ರ ಶೇಖರ್​ ರಾವ್​ ಈಗಲೇ ಚುನಾವಣಾ ಪ್ರಚಾರವನ್ನೂ ಪ್ರಾರಂಭಿಸಿದ್ದಾರೆ.

ಬಿಜೆಪಿ ಶಾಸಕನೇ ಹೊಣೆಯೆಂದು ಕಾಂಗ್ರೆಸ್ ತಿರುಗೇಟು !
ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವ ಮಾತುಗಳನ್ನಾಡಿದ ಕೆ.ಚಂದ್ರಶೇಖರ್​ ರಾವ್​ ವಿರುದ್ಧ ಇದುವರೆಗೂ ಬಿಜೆಪಿ ಸರ್ಕಾರ ಒಂದೂ ಮಾತುಗಳನ್ನಾಡಲಿಲ್ಲ. ಆದರೆ ಕಾಂಗ್ರೆಸ್​ ತಿರುಗೇಟು ಕೊಟ್ಟಿದೆ. ಕರ್ನಾಟಕ ಕಾಂಗ್ರೆಸ್​ ಟ್ವಿಟರ್​​ನಲ್ಲಿ ಕೆಸಿಆರ್​ ವಿರುದ್ಧ ಕಿಡಿಕಾರಲಾಗಿದೆ. ಕಾಂಗ್ರೆಸ್​ ನಾಯಕ ಪ್ರಿಯಾಂಕ ಖರ್ಗೆ ಟ್ವೀಟ್​ ಮಾಡಿ, ‘ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್​ ಪಾಟೀಲ್​ ಅವರ ಭಾಷಣದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ನಾವು ರಾಯಚೂರಿನವರು ತುಂಬ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ನಮ್ಮನ್ನು ತೆಲಂಗಾಣಕ್ಕಾದರೂ ಸೇರಿಸಿಬಿಡಿ’ ಎಂದು ಹೇಳುವುದನ್ನು ಕೇಳಬಹುದು. ಅದೇ ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಭು ಚೌಹಾಣ್​ ಕೂಡ ಇದ್ದಾರೆ. ಈ ವಿಡಿಯೋ ಶೇರ್​ ಮಾಡಿದ ಪ್ರಿಯಾಂಕ್​ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಅಂದು ಶಿವರಾಜ್​ ಪಾಟೀಲ್ ಹೇಳಿದ್ದೇನು?
2021ರಲ್ಲಿ, ಕೇಂದ್ರ ಸಚಿವ ಪ್ರಭು ಚೌಹಾಣ್​ ಎದುರು ವೇದಿಕೆ ಮೇಲೆ ನಿಂತು, ಸಚಿವರನ್ನೇ ನೋಡುತ್ತ ಮಾತನಾಡಿದ್ದ ರಾಯಚೂರು ನಗರ ಶಾಸಕ ಡಾ. ಶಿವರಾಜ್​ ಪಾಟೀಲ್​ ‘ನಮ್ಮಲ್ಲಿ ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹೈದರಾಬಾದ್ ಕರ್ನಾಟಕ ಎಂದರೆ ಕಲಬುರಗಿ, ಬೀದರ್​. ನಮ್ಮ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಬಿಡಬೇಕು. ಸ್ವಲ್ಪ ನಿಮ್ಮಂಥ ಹಿರಿಯರು, ಸಂಪುಟದಲ್ಲಿ ಸ್ಥಾನ ಹೊಂದಿದ್ದೀರಿ. ನೀವಾದರೂ ನಮ್ಮ ರಾಯಚೂರಿಗೆ ಜೀವ ಕೊಡಬೇಕು. ಸತ್ತ ಹೆಣಗಳು ಆದಹಾಗೆ ಆಗಿದೀವಿ ನಾವು. ಎಷ್ಟು ವದರಿದರೂ ನಮ್ಮ ವೈಸ್ ಕೇಳುತ್ತಿಲ್ಲ. ನಮಗೆ ಮುಂದೆ ಏನು ದಾರಿ? ಸ್ಟ್ರೈಕ್​ ಮಾಡೋದು ಒಂದೇ ದಾರಿ’ ಎಂದು ಹೇಳಿದ್ದರು. ಹೀಗೆಲ್ಲ ಹೇಳಿ, ರಾಯಚೂರನ್ನು ನಿರ್ಲಕ್ಷಿಸಬೇಡಿ ಎಂದೂ ಅವರು ಕೇಳಿಕೊಂಡಿದ್ದರು.

ಇದೀಗ ಅದೇ ವಿಡಿಯೋವನ್ನು ಶೇರ್​ ಮಾಡಿಕೊಂಡ ಪ್ರಿಯಾಂಕ್​ ಖರ್ಗೆ, ‘ನಮ್ಮನ್ನು ತೆಲಂಗಾಣಕ್ಕಾದರೂ ಸೇರಿಸಿ ಎಂದು ಒಬ್ಬ ಬಿಜೆಪಿ ಶಾಸಕ ಹೇಳಿ ವರ್ಷವೇ ಆಗುತ್ತ ಬಂತು. ಅವರ ವಿರುದ್ಧ ಇನ್ನೂ ಯಾಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಾಗಲೀ, ಬಿಜೆಪಿ ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಆಗಲೀ ಕ್ರಮ ಕೈಗೊಂಡಿಲ್ಲ. ನಮ್ಮ ರಾಜ್ಯದ ಆಡಳಿತ ಪಕ್ಷದ ಒಬ್ಬ ಶಾಸಕ ಹೀಗೆ ಹೇಳಿಕೆ ಕೊಟ್ಟಿದ್ದಕ್ಕೇ, ಅಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ಕೂಡ ರಾಯಚೂರನ್ನು ತೆಲಂಗಾಣದಲ್ಲಿ ವಿಲೀನಗೊಳಿಸುವ ಮಾತುಗಳನ್ನಾಡಿದ್ದಾರೆ. ಆದರೆ ಇದನ್ನು ನಾವು ಒಪ್ಪುವುದಿಲ್ಲ. ರಾಯಚೂರು ಕರ್ನಾಟಕಕ್ಕೆ ಸೇರಿದ್ದು ಮತ್ತು ಮುಂದೆಯೂ ಕರ್ನಾಟಕದ್ದೇ ಆಗಿರುತ್ತದೆ’ ಎಂದು ಹೇಳಿದ್ದಾರೆ. ಮುಂದುವರಿದು ಟ್ವೀಟ್ ಮಾಡಿದ ಅವರು. ‘ಕೆ.ಚಂದ್ರಶೇಖರ್​ ರಾವ್​ ಹೇಳಿಕೆ ನೀಡಿ, 24 ಗಂಟೆಯೇ ಕಳೆದು ಹೋದರೂ ಬಿಜೆಪಿಯ ಒಬ್ಬೇ ಒಬ್ಬ ನಾಯಕ ಈ ಬಗ್ಗೆ ಹೇಳಿಕೆ ನೀಡದೆ ಇರುವುದು ನಿಜಕ್ಕೂ ಬೇಸರ ಮೂಡಿಸಿದೆ’ ಎಂದೂ ಹೇಳಿದ್ದಾರೆ.

ಕರ್ನಾಟಕ ಕಾಂಗ್ರೆಸ್​ ಟ್ವೀಟ್​ ಮಾಡಿ, ‘ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್​ ಈ ಹೇಳಿಕೆ ನೀಡಿದ್ದರಿಂದಲೇ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​, ರಾಯಚೂರಿನ ಜನ ತೆಲಂಗಾಣಕ್ಕೆ ಸೇರಲು ಬಯಸುತ್ತಿದ್ದಾರೆ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ಇಂತಹ ಗಂಭೀರ ಹೇಳಿಕೆಗೆ ನಿಮ್ಮ ಉತ್ತರವಿಲ್ಲವೇಕೆ? ನಿಮ್ಮ ಈ ‘ಮೌನ’ ಸಮ್ಮತಿಯ ಲಕ್ಷಣವೇ? ಕಲ್ಯಾಣ ಕರ್ನಾಟಕದೆಡೆಗಿನ ನಿರ್ಲಕ್ಷ್ಯವೇ? ಅಭಿವೃದ್ಧಿ ವಂಚಿಸಿದ ಪಾಪಪ್ರಜ್ಞೆಯೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಬೆಂಗಳೂರು ಮೇಲೆ KTR ಕಣ್ಣು: ಹೈದರಾಬಾದಿಗೆ ಬನ್ನಿ ಎಂದ ತೆಲಂಗಾಣ ಸಚಿವ

Exit mobile version