Site icon Vistara News

ಈ ರೈಲ್ವೆ ಸ್ಟೇಶನ್‌ಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್‌ ಬೆಲೆ ₹50ಕ್ಕೆ ಏರಿಸಲಾಗಿದೆ

railway

ಮುಂಬೈ: ನಗರದ ಕೆಲವು ರೈಲ್ವೆ ಸ್ಟೇಶನ್‌ಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್‌ ಬೆಲೆಯನ್ನು ತಾತ್ಕಾಲಿಕವಾಗಿ ₹10 ರಿಂದ ₹50ಕ್ಕೆ ಏರಿಸಲು ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ ವಲಯ ನಿರ್ಧಾರ ಮಾಡಿದೆ.

ಅದರ ಅನ್ವಯ, ಮುಂಬೈನ ಸಿಎಸ್‌ಎಂಟಿ (ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌), ದಾದರ್‌, ಎಲ್‌ಟಿಟಿ (ಲೋಕಮಾನ್ಯ ತಿಲಕ್‌ ಟರ್ಮಿನಸ್‌), ಥಾಣೆ, ಕಲ್ಯಾಣ್‌ ಮತ್ತು ಪನ್ವೇಲ್‌ ರೈಲ್ವೆ ಸ್ಟೇಶನ್‌ಗಳಲ್ಲಿ ಮೇ 9 ರಿಂದ 23ರವರೆಗೆ ಪ್ಲಾಟ್‌ಫಾರ್ಮ್‌ ಟಿಕೆಟ್‌ ಬೆಲೆ ₹50 ಆಗಲಿದೆ. ಪ್ರಯಾಣಿಕರೊಟ್ಟಿಗೆ ಬರುವ ಅವರ ಬಂಧುಗಳು, ಸ್ನೇಹಿತರು, ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗಿ, ಆಗುತ್ತಿರುವ ಗೊಂದಲ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಗ ಬೇಸಿಗೆಯಾಗಿದ್ದರಿಂದ ರಜೆ ಕಳೆಯಲು ಪ್ರವಾಸಕ್ಕೆ ಹೋಗುವವರು, ಬಂಧುಗಳ ಮನೆಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚು. ಸ್ಟೇಶನ್‌ಗೆ ಬಂದಿಳಿಯುವವರನ್ನು ಬರಮಾಡಿಕೊಳ್ಳಲು ಅಥವಾ ಬೇರೆ ಪ್ರದೇಶಗಳಿಗೆ ಹೋಗುವವರನ್ನು ಕಳಿಸಲು ಬರುವವರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದಾಗಿ ಸ್ಟೇಶನ್‌ಗಳು ತುಂಬಿ ತುಳುಕುತ್ತಿವೆ. ಪ್ರಯಾಣಿಕರೊಟ್ಟಿಗೆ ಬರುವವರಿಂದಾಗಿ ಅನೇಕ ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿವೆ.

ಕೆಲವೊಮ್ಮೆಯಂತೂ ರೈಲು ಅರ್ಧ ದೂರ ಹೋದ ಬಳಿಕ ಅಲರಾಂ ಸರಪಳಿ ಎಳೆದ ಉದಾಹರಣೆಗಳೂ ಇವೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಸೆಂಟ್ರಲ್‌ ರೈಲ್ವೆ ಈ ನಿರ್ಧಾರಕ್ಕೆ ಬಂದಿದ್ದಾಗಿ ವಕ್ತಾರ ಶಿವಾಜಿ ಸುತಾರ್‌ ತಿಳಿಸಿದ್ದಾರೆ. ಹಾಗೇ, ಅನಗತ್ಯವಾಗಿ ರೈಲಿನ ಸರಪಳಿ ಎಳೆದಿದ್ದಕ್ಕಾಗಿ ನಮ್ಮ ವ್ಯಾಪ್ತಿಯಲ್ಲಿ ಇದುವರೆಗೆ 188 ಜನರ ವಿರುದ್ಧ ಕ್ರಮ ಜರುಗಿಸಲಾಗಿದ್ದು, 94 ಸಾವಿರ ರೂಪಾಯಿ ದಂಡ ವಸೂಲಿ ಮಾಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನಂತಕುಮಾರ್‌ ಅವರ ಕೊಡುಗೆ ಅಪಾರ: CM ಬಸವರಾಜ ಬೊಮ್ಮಾಯಿ ಶ್ಲಾಘನೆ

ವಾಸ್ತವದಲ್ಲಿ ಈ ರೈಲ್ವೆ ಎಚ್ಚರಿಕೆ ಸರಪಳಿಗಳು ಇರುವುದು ಏನಾದರೂ ತುರ್ತು ಸಂದರ್ಭದಲ್ಲಿ ಬಳಸಲು. ಆದರೆ ಪ್ರಯಾಣಿಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಕೇಂದ್ರ ರೈಲ್ವೆ ಆರೋಪ. ಸಬ್‌ ಅರ್ಬನ್‌ ರೈಲುಗಳಲ್ಲಿ ಈದು ಜಾಸ್ತಿಯಾಗಿದೆ. ತಡವಾಗಿ ಬಂದವರು, ಮಧ್ಯ ಯಾವುದೋ ಸ್ಟೇಶನ್‌ನಲ್ಲಿ ಇಳಿದು ಹೋಗಿ ತಡ ಮಾಡಿದವರೆಲ್ಲ ಸರಪಳಿಗಳನ್ನು ಎಳೆಯುತ್ತಿದ್ದಾರೆ. ಹೀಗೆ ಅನಗತ್ಯವಾಗಿ, ತಮ್ಮ ಅನುಕೂಲಕ್ಕೆ ಎಚ್ಚರಿಕೆ ಸರಪಳಿ ಎಳೆಯುವ ಪ್ರಕರಣಗಳ ಬಗ್ಗೆ ಕೇಂದ್ರ ರೈಲ್ವೆ ತೀವ್ರ ನಿಗಾ ಇಟ್ಟಿದೆ. ಅನಗತ್ಯವಾಗಿ ಯಾರಾದರೂ ಚೈನ್‌ ಎಳೆದಿದ್ದು ಕಂಡುಬಂದರೆ ರೈಲ್ವೆ ರಕ್ಷಣಾ ಪಡೆ ಪೊಲೀಸರು ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದಾರೆ.  

ಮುಂಬೈ ವಿಭಾಗದಲ್ಲಿ ಏಪ್ರಿಲ್‌ 1ರಿಂದ 30ರವರೆಗೆ ಅಲರಾಂ ಚೈನ್‌ ಎಳೆದ 332  ಕೇಸ್‌ಗಳು ದಾಖಲೆಗೆ ಸಿಕ್ಕಿವೆ. ಅದರಲ್ಲಿ 53 ಪ್ರಕರಣಗಳಿಗೆ ಸೂಕ್ತ ಕಾರಣವಿದೆ. ಉಳಿದ 279 ಕೇಸ್‌ಗಳಿಗೆ ಯಾವುದೇ ಸರಿಯಾದ ಕಾರಣವಿಲ್ಲ. ಹೀಗಾಗಿ 188 ಮಂದಿ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆ ಸೆಕ್ಷನ್‌ 141ರಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದೂ ಕೇಂದ್ರ ರೈಲ್ವೆ ತಿಳಿಸಿದೆ.

ಇದನ್ನೂ ಓದಿ | ಕರಾವಳಿ ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರಿಗೆ ಇನ್ನೂ ಬೇಗ ತಲುಪಿ

Exit mobile version