Site icon Vistara News

New Trains: ದೇಶಾದ್ಯಂತ ಓಡಲಿವೆ 3 ಸಾವಿರ ಹೊಸ ರೈಲುಗಳು; ಕರ್ನಾಟಕಕ್ಕೆ ಎಷ್ಟು?

Rapid X Train And Narendra Modi

Railways to launch 3,000 new trains in 5 years: Says Ashwini Vaishnaw

ನವದೆಹಲಿ: ದೇಶದಲ್ಲಿ ಈಗಾಗಲೇ ವಂದೇ ಭಾರತ್‌ (Vande Bharat), ರ‍್ಯಾಪಿಡ್‌ ಎಕ್ಸ್‌ (Rapid X) ಸೇರಿ ಹಲವು ಅತ್ಯಾಧುನಿಕ ರೈಲುಗಳು ಜನಮೆಚ್ಚುಗೆ ಗಳಿಸಿವೆ. ರೈಲುಗಳಲ್ಲೂ ವಿಮಾನದ ರೀತಿಯ ಸೌಕರ್ಯಗಳು ಲಭಿಸುತ್ತಿವೆ. ಇದರ ಬೆನ್ನಲ್ಲೇ, ದೇಶಾದ್ಯಂತ ಇನ್ನೂ 3 ಸಾವಿರ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ (Central Government) ಯೋಜನೆ ರೂಪಿಸಿದೆ. “ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 3 ಸಾವಿರ ಹೊಸ ರೈಲುಗಳ ಓಡಾಟ ನಡೆಯಲಿದೆ” ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಮಾಹಿತಿ ನೀಡಿದ್ದಾರೆ.

“ದೇಶದ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರಯಾಣಿಕರಿಗೆ ತಕ್ಕ ಹಾಗೆ ರೈಲುಗಳನ್ನು ಓಡಿಸುವುದು ನಮ್ಮ ಗುರಿಯಾಗಿದೆ. ಸದ್ಯ ವರ್ಷಕ್ಕೆ 8೦೦ ಕೋಟಿ ಪ್ರಯಾಣಿಕರು ರೈಲುಗಳಲ್ಲಿ (ಒಬ್ಬರು ಹಲವು ಬಾರಿ ಪ್ರಯಾಣಿಸುವುದರಿಂದ ಜನಸಂಖ್ಯೆಗಿಂತ ಹೆಚ್ಚು) ಸಂಚರಿಸುತ್ತಾರೆ. ಇದನ್ನು ಒಂದು ಸಾವಿರ ಕೋಟಿಗೆ ಏರಿಕೆ ಮಾಡುವುದು ಉದ್ದೇಶವಾಗಿದೆ. ಹಾಗಾಗಿ, ಇನ್ನೂ 3 ಸಾವಿರ ಹೊಸ ರೈಲುಗಳ ಅವಶ್ಯಕತೆ ಇದೆ” ಎಂದು ತಿಳಿಸಿದರು. ಆದರೆ, ಯಾವ ರಾಜ್ಯಗಳಿಗೆ ಎಷ್ಟು ರೈಲು, ಕರ್ನಾಟಕಕ್ಕೆ ಎಷ್ಟು ರೈಲು ಸಿಗಲಿವೆ ಎಂಬುದರ ಕುರಿತು ವಿವರಣೆ ನೀಡಿಲ್ಲ.

ಪ್ರತಿವರ್ಷವೂ ಹೊಸ ರೈಲುಗಳ ಸಂಚಾರ

“ಹಂತ ಹಂತವಾಗಿ ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ. ಶುರುವಿನಲ್ಲಿ ವರ್ಷಕ್ಕೆ 200ರಿಂದ 250 ಹೊಸ ರೈಲುಗಳ ಓಡಾಟ ಆರಂಭವಾಗಲಿದೆ. ಮತ್ತೊಂದೆಡೆ ಇನ್ನೂ 400-450 ವಂದೇ ಭಾರತ್‌ ರೈಲುಗಳ ಸಂಚಾರವೂ ಶುರುವಾಗಲಿದೆ. ಇದರೊಂದಿಗೆ ದೇಶಾದ್ಯಂತ ರೈಲು ಸಂಪರ್ಕವನ್ನು ವಿಸ್ತರಿಸುವುದು, ಇನ್ನೂ ಹೆಚ್ಚಿನ ನಾಗರಿಕರು ರೈಲುಗಳಲ್ಲಿ ಓಡಾಡುವಂತೆ ಉತ್ತೇಜನ ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ” ಎಂದು ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದರು.

ಇದನ್ನೂ ಓದಿ: Vande Bharat : ಗಮನಿಸಿ, ಧಾರವಾಡ-ಬೆಂಗಳೂರು ವಂದೇ ಭಾರತ್‌ ಸಮಯ ಬದಲಾಗಿದೆ, ಈಗ ಅರ್ಧ ಗಂಟೆ ಫಾಸ್ಟ್‌

ರೈಲು ಸಂಪರ್ಕ ವಿಸ್ತರಣೆ, ವೇಗಕ್ಕೂ ಆದ್ಯತೆ

ಹೊಸ ರೈಲುಗಳ ಓಡಾಟದ ಜತೆಗೆ ದೇಶಾದ್ಯಂತ ರೈಲುಗಳ ಜಾಲವನ್ನು ವಿಸ್ತರಿಸುವುದು ಕೂಡ ಆದ್ಯತೆಯಾಗಿದೆ ಎಂದು ಕೇಂದ್ರ ಸಚಿವ ತಿಳಿಸಿದರು. “ವೇಗವಾಗಿ ಓಡುವ ರೈಲುಗಳ ಸಂಖ್ಯೆ ಹೆಚ್ಚಳ, ಹೊಸ ಹೊಸ ರೈಲು ಮಾರ್ಗಗಳನ್ನು ಸೃಷ್ಟಿಸಿ ರೈಲು ಜಾಲವನ್ನು ವಿಸ್ತರಣೆ ಮಾಡುವುದು, ಸಮಯಕ್ಕೆ ಸರಿಯಾಗಿ ರೈಲುಗಳು ಸಂಚಾರ ಆರಂಭಿಸಿ, ನಿಗದಿತ ಸಮಯಕ್ಕೆ ರೈಲು ನಿಲ್ದಾಣ ತಲುಪುವ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ. ಹಂತ ಹಂತವಾಗಿ ಎಲ್ಲ ಯೋಜನೆಗಳನ್ನೂ ಜಾರಿಗೆ ತರಲಾಗುವುದು” ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version