ಬಿಜಾಪುರ: ಸುರಿಯುತ್ತಿರುವ ಮಳೆಯಿಂದಾಗಿ(Rain News) ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲಾಗದ ಗರ್ಭಿಣಿಯೊಬ್ಬಳು, ನದಿ ದಂಡೆಯಲ್ಲೇ ಮಗುವಿಗೆ ಜನ್ಮವಿತ್ತ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಬಿಜಾಪುರದ ಜಾರ್ಗೋಯ ಗ್ರಾಮದ ನಿವಾಸಿ, ತುಂಬು ಗರ್ಭಿಣಿ ಸರಿತಾ ಅವರಿಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಮ್ಮ ಮನೆಯಿಂದ ಒಂದು ಕಿ.ಮೀ ದೂರದಲ್ಲಿದ್ದ ಜೋರ್ವಾಯ ನದಿಯವರೆಗೆ ಕುಟುಂಬದವರು ಗರ್ಭಿಣಿಯನ್ನು ಬಿದಿರಿನ ಗಳುವಿಗೆ ಜೋಲಿ ಕಟ್ಟಿ, ಅದರಲ್ಲಿ ಹೊತ್ತು ಕರೆತಂದರು. ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿತ್ತು. ಅದನ್ನು ದಾಟದೆ ವೈದ್ಯಕೀಯ ಸೌಲಭ್ಯ ದೊರೆಯುವುದು ಸಾಧ್ಯವಿರಲಿಲ್ಲ. ಇದರಿಂದ ಆತಂಕಿತರಾದ ಕುಟುಂಬದ ಸದಸ್ಯರು, ಜಿಲ್ಲಾಡಳಿತಕ್ಕೆ ವಿಷಯ ತಿಳಿಸಿದರು.
ಈ ತಾಣದತ್ತ ಎಸ್‌ಡಿಆರ್‌ಎಫ್ ರಕ್ಷಣಾ ತಂಡ ಧಾವಿಸುವಷ್ಟರಲ್ಲಿ ನದಿ ದಂಡೆಯಲ್ಲೇ ಮಗು ಜನಿಸಿತ್ತು. ಮಗು ಜನಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ, ನವಜಾತ ಶಿಶು ಮತ್ತು ತಾಯಿಯನ್ನು ದೋಣಿಯಲ್ಲಿ ಸುರಕ್ಷಿತವಾಗಿ ನದಿ ದಾಟಿಸಿತು. ಆದರೆ ಮಳೆಯಿಂದಾಗಿ ರಸ್ತೆ ಎಷ್ಟು ಹಾಳಾಗಿತ್ತೆಂದರೆ ನದಿಯ ಆಚೆಯ ದಂಡೆಗೆ ಬರಲೂ ಆಂಬ್ಯುಲೆನ್ಸ್‌ಗೆ ಸಾಧ್ಯವಾಗಲಿಲ್ಲ. ಬಿದಿರಿನ ಗಳಕ್ಕೆ ಕಟ್ಟಿದ್ದ ಜೋಲಿಯಲ್ಲೇ ತಾಯಿ ಮತ್ತು ಮಗುವನ್ನು ಸುಮಾರು 3 ಕಿ.ಮೀ. ಹೊತ್ತೊಯ್ದ ಕುಟುಂಬದ ಸದಸ್ಯರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಛತ್ತೀಸ್‌ಗಢದಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ 11 ವರ್ಷದ ಬಾಲಕನ ರಕ್ಷಣೆ, 110 ಗಂಟೆಗಳ ಯಶಸ್ವಿ ಕಾರ್ಯಾಚರಣೆ