ನವದೆಹಲಿ: ದಶಕದಲ್ಲೇ ಕಂಡು ಕೇಳರಿಯದ ಮಳೆಗೆ ಉತ್ತರ ಭಾರತ ತತ್ತರಿಸಿಹೋಗಿದ್ದು, ಬುಧವಾರವೂ ವರುಣನ ಆರ್ಭಟ ಮುಂದುವರಿದಿದೆ. ಉತ್ತರಾಖಂಡದ ಪೌರಿಯಲ್ಲಿ ಪ್ರವಾಹದಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ದೆಹಲಿಯಲ್ಲಂತೂ ಯಮುನೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಅತ್ತ, ಹರಿಯಾಣದಲ್ಲಿ ಕೂಡ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮಳೆಯ ತೀವ್ರತೆ ತುಸು ಕಡಿಮೆಯಾದರೂ, ಭೂಕುಸಿತ, ಮನೆ ಕುಸಿತ, ರಸ್ತೆಗಳ ಸಂಪರ್ಕ ಕಡಿತದಿಂದಾಗಿ ಜನ ನಲುಗಿಹೋಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ್ದ 2 ಸಾವಿರ ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಇದುವರೆಗೆ ಮಳೆಯಿಂದಾಗಿ 4 ಸಾವಿರ ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಮಳೆಯ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾಗದ ಕಾರಣ ಯಾರೂ ಪ್ರವಾಸಕ್ಕೆ ತೆರಳಬಾರದು ಎಂದು ಸರ್ಕಾರ ಮನವಿ ಮಾಡಿದೆ. ಇನ್ನು, ವಿದ್ಯುತ್ ಸಂಪರ್ಕ ಕಡಿತಗೊಂಡು ಜನ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಯಮುನೆ ಅಪಾಯಕಾರಿ
ದೆಹಲಿಯಲ್ಲಿ ಯಮುನಾ ನದಿಯು 45 ವರ್ಷಗಳ ಬಳಿಕ ನೀರಿನ ಮಟ್ಟ ಗರಿಷ್ಠವಾಗಿದೆ. ಯಮುನಾ ನದಿಯ ಹರಿವು 207.72 ಮೀಟರ್ ಆಗಿದ್ದು, 1978ರಲ್ಲಿ ಇಷ್ಟೊಂದು ಮಟ್ಟದಲ್ಲಿ ನದಿ ಉಕ್ಕಿ ಹರಿದಿತ್ತು ಎಂದು ತಿಳಿದುಬಂದಿದೆ. ಆದಾಗ್ಯೂ, ಮಳೆಯಿಂದಾಗಿ ದೆಹಲಿಯ ಹಲವೆಡೆ ಸೆಕ್ಷನ್ 144 ಜಾರಿಯಾಗಿದೆ. ಮಳೆಯ ಪ್ರಮಾಣ ಇನ್ನೂ ಜಾಸ್ತಿಯಾಗುತ್ತಿರುವ ಕಾರಣ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಮರ್ಜನ್ಸಿ ಮೀಟಿಂಗ್ ಕರೆದಿದ್ದಾರೆ. ಪರಿಹಾರಕ್ಕಾಗಿ ಸಕಲ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Rain News : ರಾಜ್ಯದಲ್ಲಿ ಮಳೆ ಅವಾಂತರಕ್ಕೆ 21 ಬಲಿ, 47ಕ್ಕೂ ಹೆಚ್ಚು ಜಾನುವಾರು ಸಾವು
ಉತ್ತರ ಪ್ರದೇಶದಲ್ಲಿ Yellow ಅಲರ್ಟ್
ಉತ್ತರ ಪ್ರದೇಶದಲ್ಲಿ ಕೂಡ ಮಳೆ ಸಂಬಂಧಿತ ಅವಘಡಗಳಿಂದ ಇದುವರೆಗೆ 40ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೆ, ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್, ಹರಿಯಾಣ, ಉತ್ತರಾಖಂಡ ಸೇರಿ ಹಲವೆಡೆಯೂ ವರುಣನ ಆರ್ಭಟ ಮುಂದುವರಿದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.