ನೊಯ್ಡಾ: ಉತ್ತರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿ ಜನ-ಜಾನುವಾರುಗಳು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ. ನದಿ ತೀರದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಇಷ್ಟಾದರೂ, ಮಳೆ ಸಂಬಂಧಿತ ಅವಘಡಗಳಿಂದ ಉತ್ತರ ಪ್ರದೇಶದಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (NDRF) ಜನರ ಜತೆಗೆ ಜಾನುವಾರುಗಳನ್ನೂ ರಕ್ಷಿಸಿದ್ದಾರೆ. ಅದರಲ್ಲೂ, ಎನ್‌ಡಿಆರ್‌ಎಫ್ ಸಿಬ್ಬಂದಿಯು ನೊಯ್ಡಾದಲ್ಲಿ ಪ್ರೀತಂ (PRITAM) ಎಂಬ ವಿಶೇಷ ತಳಿಯ ಗುಳಿ ಸೇರಿ ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರೀತಂ (PRITAM Bull) ತಳಿಯ ಒಂದು ಗೂಳಿಯ ಬೆಲೆಯು ಬಿಎಂಡಬ್ಲ್ಯೂ ಕಾರಿನ ಬೆಲೆಗೆ ಸಮವಾಗಿರುವುದು ಅಚ್ಚರಿ ಎನಿಸಿದೆ.
ಹೌದು, ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಪ್ರೀತಂ ತಳಿಯ ಗೂಳಿಯನ್ನು ಹರಸಾಹಸ ಪಟ್ಟು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಜಾನುವಾರಗಳನ್ನು ಸಿಬ್ಬಂದಿ ರಕ್ಷಿಸಿದ್ದು, ಇದಾದ ಬಳಿಕವೇ ಒಂದು ಗೂಳಿಯು ಪ್ರೀತಂ ತಳಿಯ ಗೂಳಿ ಎಂಬುದು ಗೊತ್ತಾಗಿದೆ. ಈ ಕುರಿತು 8ನೇ ಬೆಟಾಲಿಯನ್ ಎನ್‌ಡಿಆರ್‌ಎಫ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
#आपदासेवासदैवसर्वत्र
— 8th BN NDRF (@8NdrfGhaziabad) July 15, 2023
Team @8NdrfGhaziabad has rescued 3 cattles including India's No.1 Bull "PRITAM" costing 1 Cr. from Noida. NDRF teams are working hard to save lives in flood affected areas.#animalrescue @ndmaindia @NDRFHQ @noida_authority @HMOIndia @PIBHomeAffairs pic.twitter.com/MdMRikYFVz
ಗೂಳಿಯ ಫೋಟೊ ಸಮೇತ ಎನ್‌ಡಿಆರ್‌ಎಫ್ ಟ್ವೀಟ್ ಮಾಡಿದೆ. “ಘಾಜಿಯಾಬಾದ್‌ನ ಎನ್‌ಡಿಆರ್‌ಎಫ್ ಸಿಬ್ಬಂದಿಯು ಭಾರತದ ನಂಬರ್ ಒನ್ ಗೂಳಿಯನ್ನು ರಕ್ಷಿಸಿದ್ದಾರೆ. ಇದರ ಬೆಲೆಯು ಸುಮಾರು ಒಂದು ಕೋಟಿ ರೂಪಾಯಿ ಆಗಿದೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಸಿಬ್ಬಂದಿಯು ಯಾವಾಗಲೂ ಹೆಚ್ಚಿನ ಶ್ರಮ ವಹಿಸುತ್ತದೆ” ಎಂದು ಎನ್‌ಡಿಆರ್‌ಎಫ್ ತಿಳಿಸಿದೆ.
ಇದನ್ನೂ ಓದಿ: IND vs WI: ಬೌಂಡರಿ ಬಾರಿಸಿದ ಬಳಿಕ ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ಕೊಹ್ಲಿ; ವಿಡಿಯೊ ವೈರಲ್
ಪ್ರೀತಂ ತಳಿಯ ವಿಶೇಷ ಗೂಳಿಯ ಬೆಲೆಯು ಒಂದು ಕೋಟಿ ರೂ. ಎಂಬ ಮಾಹಿತಿಯನ್ನು ಎನ್‌ಡಿಆರ್‌ಎಫ್ ನೀಡುತ್ತಲೇ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಇಷ್ಟೊಂದು ದುಡ್ಡಿನಲ್ಲಿ ಒಂದು ಬಿಎಂಡಬ್ಲ್ಯೂ X5 (BMW X5) ಕಾರು ಖರೀದಿಸಬಹುದಿತ್ತಲ್ಲ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಂದಿಷ್ಟು ಜನ ಎನ್‌ಡಿಆರ್‌ಎಫ್ ಶ್ರಮವನ್ನು ಶ್ಲಾಘಿಸಿದ್ದಾರೆ.