Site icon Vistara News

Rain News: ಜವರಾಯನಾದ ಮಳೆರಾಯ, ವರುಣ ಸಂಬಂಧಿತ ಅವಘಡಗಳಿಂದ 28 ಮಂದಿ ಸಾವು

Floods In Assam

Rain News: Landslides, flash floods and cloudbursts claim 28 lives

ನವದೆಹಲಿ: ಕರ್ನಾಟಕದ ಹಲವೆಡೆ ಇನ್ನೂ ಮುಂಗಾರು ಚುರುಕಾಗಿಲ್ಲ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಮಳೆ ಸಂಬಂಧಿ (Rain News) ಅವಘಡಗಳಿಂದ 28 ಮಂದಿ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ 19, ಅಸ್ಸಾಂ 7 ಹಾಗೂ ಮಹಾರಾಷ್ಟ್ರದಲ್ಲಿ ಇಬ್ಬರು ಮಳೆ ಸಂಬಂಧಿತ ಅವಘಡಗಳಿಂದ ಮೃತಪಟ್ಟಿದ್ದಾರೆ.

ಹಿಮಾಚಲ ಪ್ರದೇಶ ತತ್ತರ

ವರುಣನ ಆರ್ಭಟಕ್ಕೆ ಹಿಮಾಚಲ ಪ್ರದೇಶ ತತ್ತರಿಸಿದೆ. ಭೂಕುಸಿತ, ದಿಢೀರ್‌ ಪ್ರವಾಹ ಹಾಗೂ ಮೇಘಸ್ಫೋಟದಿಂದ ಕಳೆದ 5 ದಿನದಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ರಾಜ್ಯದಲ್ಲಿ 219 ಕೋಟಿ ರೂಪಾಯಿ ನಷ್ಟವಾಗಿದೆ. ಮಳೆ ಸಂಬಂಧಿತ ಅವಘಡಗಳಿಂದ 34 ಜನ ಗಾಯಗೊಂಡಿದ್ದರೆ, 352 ಜಾನುವಾರುಗಳು ಅಸುನೀಗಿವೆ. ಭೂಕುಸಿತದಿಂದಾಗಿ ಸಂಚಾರ ಅಸ್ತವ್ಯಸ್ತವಾಗುವ ಜತೆಗೆ ಜನರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.

ಅಸ್ಸಾಂ, ಮಹಾರಾಷ್ಟ್ರದಲ್ಲಿ ಜನಜೀವನ ಅಸ್ತವ್ಯಸ್ತ

ಸತತ ಮಳೆಯಿಂದಾಗಿ ಅಸ್ಸಾಂನಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಭಾರಿ ಮಳೆಯಿಂದಾಗಿ ಅವಘಡಗಳು ಸಂಭವಿಸಿ ಇದುವರೆಗೆ 7 ಜನ ಮೃತಪಟ್ಟಿದ್ದಾರೆ. ಲಖೀಮ್‌ಪುರ, ಸೋನಿತ್‌ಪುರ ಹಾಗೂ ತಮಲ್‌ಪುರ ಸೇರಿ 12 ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಆಶ್ರಯ ಕೇಂದ್ರಗಳಲ್ಲಿ ಅವರಿಗೆ ವಸತಿಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Rain News: ಕರಾವಳಿಯಲ್ಲಿ ಶುರುವಾಗಿದೆ ಗುಡ್ಡ ಕುಸಿತ ಭೀತಿ; ಹೆದ್ದಾರಿ ಸಂಚಾರವೀಗ ಬಹಳ ಫಜೀತಿ!

ಮಹಾರಾಷ್ಟ್ರದಲ್ಲೂ ವರುಣನ ಅಬ್ಬರ ಜೋರಾಗಿದೆ. ಮುಂಬೈನಲ್ಲಿ ಆರೇಂಜ್‌ ಅಲರ್ಟ್‌ ಘೋಷಿಸಲಾಗಿದೆ. ಮಗಥಾಣೆ ಮೆಟ್ರೋ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮಳೆಯಿಂದಾಗಿ ಮುಂಬೈ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಥಾಣೆ ಸೇರಿ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version