ನವದೆಹಲಿ: “ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್‌ಚೌಕ್‌ನಲ್ಲಿ ಭದ್ರತೆಯೇ ಇಲ್ಲದೆ ತಿರಂಗಾ ಹಾರಿಸಿದ್ದು ನಮ್ಮ ಸರ್ಕಾರದ ಸಾಧನೆ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಲೋಕಸಭೆಯಲ್ಲಿ (PM Modi Parliament Speech) ಮಾತನಾಡಿದ ಅವರು, “ಲಾಲ್‌ಚೌಕ್‌ನಲ್ಲಿ ತಿರಂಗಾ ಹಾರಿಸಿದರೆ ಶಾಂತಿ ಕದಡುತ್ತದೆ ಎಂಬ ಮಾತಿತ್ತು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಉಗ್ರರನ್ನು ನಿಗ್ರಹಿಸಲಾಗಿದೆ. ಹಾಗಾಗಿಯೇ, ಇಂದು ಭದ್ರತೆಯೇ ಇಲ್ಲದೆ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ನೆರವೇರಿಸಬಹುದಾಗಿದೆ” ಎಂದು ಹೇಳಿದರು.
“ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತು ಉಗ್ರರು ಸವಾಲು ಹಾಕುತ್ತಿದ್ದರು. ನೀವು ತಾಯಿಯ ಹಾಲು ಕುಡಿದವರಾಗಿದ್ದರೆ ಲಾಲ್‌ಚೌಕ್‌ನಲ್ಲಿ ತಿರಂಗಾ ಹಾರಿಸಿ ಎನ್ನುತ್ತಿದ್ದರು. ಆದರೆ, ಉಗ್ರರ ಸವಾಲನ್ನು ನಾವು ಸ್ವೀಕರಿಸಿದೆವು. ಸವಾಲು ಸ್ವೀಕರಿಸಿ ಉಗ್ರರನ್ನೇ ನಿಗ್ರಹಿಸಿದೆವು. ಗಣರಾಜ್ಯೋತ್ಸವದಂದು ನಾನು ಲಾಲ್‌ಚೌಕ್‌ಗೆ ಹೋದೆ. ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆಯೇ ತಿರಂಗಾ ಹಾರಿಸಿದೆ” ಎಂದು ಹೇಳಿದರು.
ದೇಶದ ಜನರೇ ನನಗೆ ಶ್ರೀರಕ್ಷೆ
“ನನ್ನ ವಿರುದ್ಧ ಯಾರು ಎಷ್ಟು ಬೇಕಾದರೂ ಟೀಕೆ ಮಾಡಲಿ. ಯಾರು ಏನೇ ಆರೋಪ ಮಾಡಲಿ. ಅದರೆ, ದೇಶದ ಜನರ ಶ್ರೀರಕ್ಷೆ ನನ್ನ ಮೇಲಿದೆ. ಇದೇ ಕೆಲವರಿಗೆ ಮುಳುವಾಗಿದೆ” ಎಂದು ಹೇಳಿದರು. “ದೇಶದ ೭೦ ವರ್ಷದ ಇತಿಹಾಸದಲ್ಲಿ ೭೦ ವಿಮಾನ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ, ಕಳೆದ ೯ ವರ್ಷದಲ್ಲಿ ೭೦ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ರಸ್ತೆ, ಮೂಲ ಸೌಕರ್ಯ, ಬಡವರ ಶ್ರೇಯೋಭಿವೃದ್ಧಿ ಸೇರಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗಿದೆ” ಎಂದರು.
ಇದನ್ನೂ ಓದಿ: PM Modi Parliament Speech: ಭಾರತದಲ್ಲಿ ಕೆಲವರಿಗೆ ಹಾರ್ವರ್ಡ್ ವಿವಿ ಶೋಕಿ, ರಾಹುಲ್ ಗಾಂಧಿಗೆ ಮೋದಿ ತಿರುಗೇಟು