Site icon Vistara News

BJP MNS Alliance: ಉದ್ಧವ್‌ ಠಾಕ್ರೆಗೆ ಟಕ್ಕರ್‌ ಕೊಡಲು ರಾಜ್‌ ಠಾಕ್ರೆ ಜತೆ ಬಿಜೆಪಿ ಮೈತ್ರಿ?

Narendra Modi And Raj Thackeray

Raj Thackeray's party to join hands with BJP? Talks held ahead of Lok Sabha polls

ಮುಂಬೈ: ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಬಿಜೆಪಿಗೆ ಸೆಡ್ಡು ಹೊಡೆಯಲು ಇಂಡಿಯಾ ಒಕ್ಕೂಟ ರಣತಂತ್ರ ರೂಪಿಸುತ್ತಿದೆ. ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ನ್ಯಾಯ ಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಇತ್ತ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವೂ ಹತ್ತಾರು ತಂತ್ರಗಳ ಮೂಲಕ ಬಹುಮತ ಪಡೆಯಲು ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಜ್‌ ಠಾಕ್ರೆ (Raj Thackeray) ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಹೌದು, ಎಂಎಎನ್‌ಎಸ್‌ ನಾಯಕರಾದ ಬಾಳಾ ನಂದಗಾಂವ್ಕರ್‌, ಸಂದೀಪ್‌ ದೇಶಪಾಂಡೆ ಹಾಗೂ ನಿತಿನ್‌ ಸರ್ದೇಸಾಯಿ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರ ನಿವಾಸಕ್ಕೆ ತೆರಳಿ, ಅವರ ಜತೆ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಎಂಎನ್‌ಎಸ್‌ ಕೂಡ ಸೇರಿಕೊಂಡು, ಒಗ್ಗೂಡಿ ಚುನಾವಣೆ ಎದುರಿಸುವ ತಂತ್ರ ಹೆಣೆಯಲಾಗಿದೆ. ಮಾತುಕತೆ ಈಗ ಸೀಟು ಹಂಚಿಕೆವರೆಗೆ ಬಂದುನಿಂತಿದೆ. ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹಾಗೂ ಎಂಎನ್‌ಎಸ್‌ ಮೈತ್ರಿ ಅಂತಿಮವಾದರೆ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯು ಬಿಜೆಪಿಗೆ ಬೆಂಬಲ ಸೂಚಿಸಿದೆ. ಹಿಂದುತ್ವದ ಆಧಾರದ ಮೇಲೆ ಇನ್ನಷ್ಟು ಮತಗಳನ್ನು ಸೆಳೆಯುವುದು, ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಬಲವನ್ನು ಮತ್ತಷ್ಟು ಕುಗ್ಗಿಸುವುದು ಬಿಜೆಪಿ ಉದ್ದೇಶವಾಗಿದೆ. ಹಾಗಾಗಿಯೇ, ಹಿಂದುತ್ವ ಕೇಡರ್‌ನ ಎಂಎನ್‌ಎಸ್‌ ಜತೆ ಮಾತುಕತೆಗೆ ಸಿದ್ಧತೆ ನಡೆಸಲಾಗುತ್ತದೆ ಎನ್ನಲಾಗಿದೆ. ಆದರೆ, ಎಂಎನ್‌ಎಸ್‌ಗೆ ಬಿಜೆಪಿ ಎಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುತ್ತದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Disqualification Verdict: ಸಿಎಂ ಶಿಂಧೆ ಬಣವೇ ನಿಜವಾದ ಶಿವಸೇನೆ, ಉದ್ಧವ್‌ ಠಾಕ್ರೆಗೆ ಭಾರೀ ಹಿನ್ನಡೆ

ಹಳ್ಳ ಹಿಡಿದ ಮಹಾ ವಿಕಾಸ್‌ ಅಘಾಡಿ

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜತೆಗೂಡಿ ರಚಿಸಿದ ಮಹಾ ವಿಕಾಸ್‌ ಅಘಾಡಿ ಬಹುತೇಕ ಹಾದಿತಪ್ಪಿದೆ. ಶಿವಸೇನೆಯ ಬಹುಪಾಲು ಶಾಸಕರನ್ನು ಸೆಳೆದುಕೊಂಡು, ಬಿಜೆಪಿಗೆ ಬೆಂಬಲ ನೀಡಿದ ಏಕನಾಥ್‌ ಶಿಂಧೆ ಈಗ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಸಿಪಿಯೂ ಇಬ್ಭಾಗವಾಗಿದ್ದು, ಶರದ್‌ ಪವಾರ್‌ ಬಣದಲ್ಲಿ ಕೇವಲ 11 ಶಾಸಕರಿದ್ದಾರೆ. ಇನ್ನು ಕಾಂಗ್ರೆಸ್‌ ಬಲವೂ ಅಷ್ಟಕ್ಕಷ್ಟೇ ಇದೆ. ಆದರೂ, ಉದ್ಧವ್‌ ಠಾಕ್ರೆ ಅವರ ಶಿವಸೇನೆಯು ಚುನಾವಣೆಯಲ್ಲಿ ಹೇಗೆ ಸೆಣಸದಲಿದೆ? ಬಿಜೆಪಿಗೆ ಹೇಗೆ ತಿರುಗೇಟು ನೀಡಲಿದೆ ಎಂಬ ಕುತೂಹಲ ಇದ್ದೇ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version