Site icon Vistara News

Rajasthan Polls: ರಾಜಸ್ಥಾನದಲ್ಲಿ 68% ಮತದಾನ; ಡಿ.3ರಂದು ಫಲಿತಾಂಶ

Assembly Elections

Assembly Elections 2024: ECI Announces Dates For All 4 states Assembly Polls

ಜೈಪುರ: ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೆಚ್ಚಿನ ಗಮನ ಸೆಳೆದಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ (Rajasthan Polls) ಮುಕ್ತಾಯಗೊಂಡಿದೆ. ಶನಿವಾರ (ನವೆಂಬರ್‌ 25) ರಾಜ್ಯಾದ್ಯಂತ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಸಂಜೆ 5 ಗಂಟೆ ಸುಮಾರಿಗೆ ಶೇ.68.24ರಷ್ಟು ಮತದಾನ ದಾಖಲಾಗಿದೆ. ಒಟ್ಟು 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಚುನಾವಣೆ ಕಣದಲ್ಲಿರುವ 1,100ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ. ಇದರ ಬೆನ್ನಲ್ಲೇ ಎಲ್ಲರ ಗಮನವೀಗ ಫಲಿತಾಂಶದ ಮೇಲಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

“ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಆರು ಗಂಟೆಯವರೆಗೆ ಮತದಾನ ಮಾಡಲು ಜನರಿಗೆ ಅವಕಾಶ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಮತಯಂತ್ರಗಳಲ್ಲಿ ಸಣ್ಣಪುಟ್ಟ ದೋಷಗಳು ಕಂಡುಬಂದಿವೆ. ಮತಯಂತ್ರಗಳನ್ನು ಸುರಕ್ಷಿತವಾಗಿ ಸ್ಟ್ರಾಂಗ್‌ ರೂಮ್‌ಗೆ ಕಳುಹಿಸಲಾಗಿದೆ” ಎಂದು ರಾಜ್ಯ ಚುನಾವಣೆ ಆಯೋಗದ ಆಯುಕ್ತ ಪ್ರವೀಣ್‌ ಗುಪ್ತಾ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್‌ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Rajasthan Polls: ರಾಜಸ್ಥಾನದಲ್ಲಿ ಮತದಾನ; ಕೈ-ಕಮಲ ಕಾದಾಟದಲ್ಲಿ ಯಾರಿಗೆ ಗದ್ದುಗೆ?

2023ರ ಲೋಕಸಭೆ ಚುನಾವಣೆಗೆ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್‌ ಎಂದೇ ಹೇಳಲಾಗುತ್ತಿದೆ. ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಅದರಲ್ಲೂ ರಾಜಸ್ಥಾನದಲ್ಲಿ 25 ಲೋಕಸಭೆ ಕ್ಷೇತ್ರಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಎಲ್ಲ 25 ಕ್ಷೇತ್ರಗಳಲ್ಲಿ (ಬಿಜೆಪಿ 24, ಆರ್‌ಎಲ್‌ಪಿ 1) ಗೆಲುವು ಸಾಧಿಸಿತ್ತು. ಈ ಬಾರಿಯೂ ಬಿಜೆಪಿ ಕ್ಲೀನ್‌ಸ್ವೀಪ್‌ ಗುರಿ ಹೊಂದಿದ್ದು, ವಿಧಾನಸಭೆ ಚುನಾವಣೆಯ ಗೆಲುವು ಮಹತ್ವ ಎನಿಸಿದೆ. ಅತ್ತ ಕಾಂಗ್ರೆಸ್‌ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ವಿಧಾನಸಭೆ ಚುನಾವಣೆಯ ಗೆಲುವು ಮಹತ್ವದ್ದಾಗಿದೆ.

Exit mobile version