Site icon Vistara News

Rajasthan Cabinet: ರಾಜ್ಯವರ್ಧನ್‌ ಸಿಂಗ್‌ ರಾಥೋರ್ ಸೇರಿ 22 ಶಾಸಕರಿಗೆ ಮಂತ್ರಿಗಿರಿ; ಹೊಸಬರಿಗೆ ಮಣೆ

Rajyavardhan Singh Rathore

Rajasthan Cabinet: Kirodi Lal Meena, Rajyavardhan Rathore among 22 MLAs sworn in as Ministers

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಆಡಳಿತ ವಿರೋಧಿ ಅಲೆಯನ್ನು ಸದುಪಯೋಗಪಡಿಸಿಕೊಂಡು ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ ನೇತೃತ್ವದ ಸರ್ಕಾರವು ಚುನಾವಣೆ ಫಲಿತಾಂಶ ಪ್ರಕಟವಾದ 26 ದಿನಗಳ ಬಳಿಕ ಕೊನೆಗೂ ಸಚಿವ ಸಂಪುಟ (Rajasthan Cabinet) ರಚನೆ ಮಾಡಿದೆ. ಕೇಂದ್ರದ ಮಾಜಿ ಸಚಿವ, ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ರಾಜ್ಯವರ್ಧನ್‌ ಸಿಂಗ್‌ ರಾಥೋರ್‌ (Rajyavardhan Singh Rathore) ಸೇರಿ 22 ಶಾಸಕರು ಶನಿವಾರ (ಡಿಸೆಂಬರ್‌ 30) ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಒಟ್ಟು 22 ಸಚಿವರಲ್ಲಿ 12 ಶಾಸಕರಿಗೆ ಸಂಪುಟ ದರ್ಜೆ, ಐವರಿಗೆ ರಾಜ್ಯ ಖಾತೆ ಹಾಗೂ ಐವರಿಗೆ ಸ್ವತಂತ್ರ ಖಾತೆ ನಿರ್ವಹಣೆಯ ಹೊಣೆ ನೀಡಲಾಗಿದೆ. ಒಟ್ಟು 22 ಸಚಿವರಲ್ಲಿ ಐವರಿಗೆ ಮಾತ್ರ ಇದಕ್ಕೂ ಮೊದಲು ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಇದರ ಹೊರತಾಗಿ 17 ಶಾಸಕರು ಇದೇ ಮೊದಲ ಬಾರಿಗೆ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಇದರೊಂದಿಗೆ ರಾಜಸ್ಥಾನದಲ್ಲಿ ಬಿಜೆಪಿಯು ಹೊಸಬರಿಗೆ ಮಣೆ ಹಾಕಿದಂತಾಗಿದೆ.

ಜೈಪುರದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ ಉಪಸ್ಥಿತರಿದ್ದರು. ರಾಜ್ಯಪಾಲ ಕಲ್ರಾಜ್‌ ಮಿಶ್ರಾ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಸಚಿವ ಸಂಪುಟ ರಚನೆ ವೇಳೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಕೆಲ ಆಪ್ತರಿಗೆ ಕೊಕ್‌ ನೀಡಲಾಗಿದೆ ಎಂದು ತಿಳಿದುಬಂದಿದೆ. ಆಂತರಿಕ ಬಿಕ್ಕಟ್ಟಿನ ಕಾರಣಕ್ಕಾಗಿಯೇ ರಾಜಸ್ಥಾನದಲ್ಲಿ ಸಚಿವ ಸಂಪುಟ ರಚನೆ ವಿಳಂಬವಾಗಿದೆ ಎನ್ನಲಾಗಿದೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 199 ಕ್ಷೇತ್ರಗಳ ಪೈಕಿ ಬಿಜೆಪಿಯು 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಆಡಳಿತದಲ್ಲಿದ್ದ ಕಾಂಗ್ರೆಸ್‌ ಕೇವಲ 69 ಕ್ಷೇತ್ರಗಳಿಗೆ ಸೀಮಿತವಾದರೆ, ಬಿಎಸ್‌ಪಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಡಿಸೆಂಬರ್‌ 15ರಂದು ಭಜನ್‌ ಲಾಲ್‌ ಶರ್ಮಾ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: Rajasthan DCM: ಯಾರಿವರು ರಾಜಸ್ಥಾನ ಡಿಸಿಎಂಗಳಾದ ದಿಯಾ ಕುಮಾರಿ, ಪ್ರೇಮ್ ಚಂದ್ ಬೈರ್ವಾ?

ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯು ಕೂಡ ಬಿಜೆಪಿಗೆ ನೆರವಾಯಿತು ಎಂದು ತಿಳಿದುಬಂದಿದೆ. ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಬೇಕು ಎಂದು ಸಚಿನ್‌ ಪೈಲಟ್‌ ಅವರೇ ಆಗ್ರಹಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಸುದ್ದಿಯಾಗಿದ್ದು ಸೇರಿ ಹಲವು ಪ್ರಕರಣಗಳು ಸರ್ಕಾರದ ಮೇಲೆ ಜನ ಇಟ್ಟ ಭರವಸೆಗಳು ಮಾಯವಾಗಲು ಕಾರಣವಾದವು. ಇದು ಬಿಜೆಪಿಯು ಸುಲಭವಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ವಿಶ್ಲೇಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version