ನವ ದೆಹಲಿ: ಒಬ್ಬರಿಗೆ ಒಂದೇ ಹುದ್ದೆ ಎಂದು ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹೇಳುತ್ತಿದ್ದಂತೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಎರಡು ಹುದ್ದೆಗಳ ಆಸೆ ಕೈ ಬಿಟ್ಟಿದ್ದಾರೆ. ಜತೆಗೇ, ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಈ ಮೊದಲು ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜತೆಗೆ ರಾಜಸ್ಥಾನದ ಸಿಎಂ ಆಗಿ ಮುಂದುವರಿಯುವ ಬಯಕೆಯನ್ನು ಹೊರ ಹಾಕಿದ್ದರು. ಎಐಐಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ನಿರ್ಧರಿಸಿದ್ದೇನೆ. ಶೀಘ್ರವೇ ನಾಮಪತ್ರ ಸಲ್ಲಿಸಲು ದಿನಾಂಕವನ್ನು ಗೊತ್ತು ಮಾಡುವೆ. ದೇಶದ ಸದ್ಯದ ಸ್ಥಿತಿಯನ್ನು ಗಮನಿಸಿದರೆ, ಪ್ರಬಲ ಪ್ರತಿಪಕ್ಷದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಒಂದೊಮ್ಮೆ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ, ರಾಜಸ್ಥಾನದ ಸಿಎಂ ಸ್ಥಾನಕ್ಕೆ ಬಹುಶಃ ಯುವ ನಾಯಕ ಸಚಿನ್ ಪೈಲಟ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಲಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರಾದರೂ ಸ್ಪರ್ಧಿಸಲು ಮುಂದಾದರೆ ಅಂಥವರಿಗೆ ಅವಕಾಶ ಕೊಡಬೇಕೆಂದು ನಾನು ರಾಹುಲ್ ಗಾಂಧಿ ಅವರಿಗೆ ಕೇಳಿಕೊಂಡಿದ್ದೇನೆ. ಗಾಂಧಿ ಕುಟುಂಬದ ಯಾರೊಬ್ಬರು ಈ ಬಾರಿ ಕಾಂಗ್ರೆಸ್ ಪ್ರೆಸಿಡೆಂಟ್ ಆಗುತ್ತಿಲ್ಲ ಎಂಬುದನ್ನೂ ಇದೇ ವೇಳೆ ಖಚಿತಪಡಿಸಿದರು.
ಬಹು ಸ್ಪರ್ಧೆ ಸಾಧ್ಯತೆ
ಎಐಐಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತವನ್ನು ಈಗಾಗಲೇ ಕೇರಳದ ತಿರುವನಂಥಪುರದ ಸಂಸದ ಶಶಿ ತರೂರ್ ಹೊರ ಹಾಕಿದ್ದಾರೆ. ಮನೀಷ್ ತಿವಾರಿ, ಮಾಜಿ ಸಿಎ ಕಮಲನಾಥ್, ದಿಗ್ವಿಜಯ ಸಿಂಗ್, ಮುಕುಲ್ ವಾಸ್ನಿಕ್ ಮತ್ತು ಪೃಥ್ವಿರಾಜ್ ಚೌಹಾಣ್ ಅವರೂ ಸ್ಪರ್ಧಿಸುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಚುನಾವಣಾ ಪ್ರಕ್ರಿಯೆಗಳು ಸೆಪ್ಟೆಂಬರ್ 24ರಿಂದ ಆರಂಭವಾಗಲಿವೆ. ಕಾಂಗ್ರೆಸ್‌ನ ಬಹುತೇಕ ಘಟಕಗಳು ರಾಹುಲ್ ಗಾಂಧಿಯೇ ಸ್ಪರ್ಧಿಸಬೇಕೆಂದು ನಿರ್ಣಯ ಕೈಗೊಂಡಿದ್ದರೂ ಅವರು ಸ್ಪರ್ಧೆಯನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ |ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಸಿಗಲಿದೆ ಮತದಾರರ ಪಟ್ಟಿ; 5 ಎಂಪಿಗಳ ಪತ್ರದ ಬೆನ್ನಲ್ಲೇ ಬದಲಾವಣೆ