Site icon Vistara News

Cleric: ಮಸೀದಿಯಲ್ಲಿ ಮಲಗಿದ್ದ 30 ವರ್ಷದ ಮೌಲ್ವಿಯನ್ನು ಬಡಿದು ಕೊಂದರು; ಹತ್ಯೆಗೆ ಕಾರಣ?

Cleric

Rajasthan Cleric Beaten To Death By Masked Men Inside Mosque In Public View

ಜೈಪುರ: ರಾಜಸ್ಥಾನದ ಅಜ್ಮೇರ್‌ನಲ್ಲಿರುವ (Ajmer) ಮಸೀದಿಯಲ್ಲಿ ಮಲಗಿದ್ದ 30 ವರ್ಷದ ಮೌಲ್ವಿಯನ್ನು (Cleric) ದುಷ್ಕರ್ಮಿಗಳು ಬಡಿದು ಕೊಂದಿದ್ದಾರೆ. ಶನಿವಾರ (ಏಪ್ರಿಲ್‌ 27) ರಾತ್ರಿ ರಾಮ್‌ಗಂಜ್‌ ವ್ಯಾಪ್ತಿಯ ಕಾಂಚನ್‌ ನಗರದಲ್ಲಿರುವ ಮಸೀದಿಯಲ್ಲಿ ಮೊಹಮ್ಮದ್‌ ಮಹೀರ್‌ (Moahammed Mahir) ಮಲಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ದೊಣ್ಣೆ ಸೇರಿ ಹಲವು ಮಾರಕಾಸ್ತ್ರಗಳಿಂದ ಬಡಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೌಲ್ವಿಯಾಗಿದ್ದ ಮೊಹಮ್ಮದ್‌ ಮಹೀರ್‌, ಆರು ಮಕ್ಕಳೊಂದಿಗೆ ಮಸೀದಿಯಲ್ಲಿ ಮಲಗಿದ್ದರು. ಇದೇ ವೇಳೆ ಹಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸಹಾಯಕ್ಕಾಗಿ ಅವರು ಕೂಗಿದರೂ ಅಕ್ಕಪಕ್ಕದವರು ಯಾರೂ ಬಂದಿಲ್ಲ. ಮಕ್ಕಳಿಗೆ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಮೌಲ್ವಿಯು ಮಸೀದಿಯಲ್ಲೇ ಮೃತಪಟ್ಟಿದ್ದಾರೆ. ಮಕ್ಕಳು ಕಿರುಚಾಡುತ್ತ, ಅಕ್ಕಪಕ್ಕದವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

“ಮೊಹಮ್ಮದ್‌ ಮಹೀರ್‌ ಅವರ ಹತ್ಯೆಗೆ ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಎಷ್ಟು ಜನ ದಾಳಿ ನಡೆಸಿದ್ದರು, ದಾಳಿ ಮಾಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ” ಎಂಬುದಾಗಿ ರಾಮ್‌ಗಂಜ್‌ ಪೊಲೀಸ್‌ ಠಾಣೆಯ ರವೀಂದ್ರ ಖಿಂಚಿ ಮಾಹಿತಿ ನೀಡಿದ್ದಾರೆ. ಮಸೀದಿಯಲ್ಲಿಯೇ ಮೌಲ್ವಿಯನ್ನು ಕೊಂದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕೆಲ ತಿಂಗಳ ಹಿಂದಷ್ಟೇ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ‌ ಇಸ್ಲಾಂ ಧರ್ಮದ ಒಳಪಂಗಡಗಳ ಮಧ್ಯೆಯೇ ನಡೆದಿತ್ತು. ಧರ್ಮ ಪ್ರಚಾರಕ್ಕೆ ಆಗಮಿಸಿದ್ದ ಮೌಲ್ವಿ ಮೇಲೆ ಕೆಲ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮೌಲ್ವಿಯೊಬ್ಬರು ಅಹಮದೀಯ ಪಂಗಡ ಪರ ಪ್ರಚಾರ ನಡೆಸಲು ಬಂದಿದ್ದರು. ಹೊಸಪೇಟೆಯಿಂದ ಆಗಮಿಸಿ ದೇವತ್ಕಲ್ ಗ್ರಾಮದಲ್ಲಿ ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಅಹಮದೀಯ ಮೌಲ್ವಿ ಖಾಜಿ ಮೊಹಮ್ಮದ್ ರಫಿ ಎಂಬುವವರು ಪ್ರಚಾರ ಮಾಡುತ್ತಿದ್ದರು.‌ ಇದೇ ವೇಲೆ ಯುವಕರು ಅವರ ಮೇಲೆ ಹಲ್ಲೆ ಮಾಡಿದ್ದರು.

ಇದನ್ನೂ ಓದಿ: ಕುರಾನ್‌ ಕಲಿಯಲು ಹೋದ ಬಾಲಕನ ಮೇಲೆ ಮಸೀದಿಯಲ್ಲೇ ಅತ್ಯಾಚಾರ; ಇದೆಂಥ ಅನಾಚಾರ!

Exit mobile version