Site icon Vistara News

ರಾಜಸ್ಥಾನ ಚುನಾವಣೆ; ಅಶೋಕ್‌ ಗೆಹ್ಲೋಟ್‌ ಪುತ್ರಗೆ ಇ.ಡಿ ಸಮನ್ಸ್;‌ ಕೈ ರಾಜ್ಯಾಧ್ಯಕ್ಷರ ಮನೆಗೆ ದಾಳಿ

ashok gehlot and vaibhav gehlot

Rajasthan CM Ashok Gehlot’s son summoned by ED in forex violation case

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ (Rajasthan Assembly Election) ದಿನಾಂಕ ಘೋಷಣೆಯಾಗಿದೆ. ಚುನಾವಣೆ ಸಂದರ್ಭಗಳಲ್ಲಿ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಗುರಾಣಿಯಾಗಿ ಬಳಸುತ್ತದೆ ಎಂಬುದು ಹಲವು ವರ್ಷಗಳ ಆರೋಪವಿದೆ. ಇದರ ಬೆನ್ನಲ್ಲೇ, ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ಅವರ ಪುತ್ರ ವೈಭವ್‌ ಗೆಹ್ಲೋಟ್‌ (Vaibhav Gehlot) ಅವರಿಗೆ ಸಮನ್ಸ್‌ ಜಾರಿಗೊಳಿಸಿದ್ದಾರೆ.

ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA-1999) ಅಡಿಯಲ್ಲಿ ಸಮನ್ಸ್‌ ಜಾರಿಗೊಳಿಸಲಾಗಿದೆ. ಅಕ್ಟೋಬರ್‌ 27ರಂದು ವೈಭವ್‌ ಗೆಹ್ಲೋಟ್‌ ಅವರು ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಸೂಚಿಸಲಾಗಿದೆ. ಜೈಪುರದಲ್ಲಿಯೇ ವೈಭವ್‌ ಗೆಹ್ಲೋಟ್‌ ವಿಚಾರಣೆ ನಡೆಯಲಿದೆ. ಕಳೆದ ಆಗಸ್ಟ್‌ನಲ್ಲಿ ಇ.ಡಿ ಅಧಿಕಾರಿಗಳು ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ, ಜೈಪುರ, ದೆಹಲಿ, ಉದಯಪುರ ಸೇರಿ ಹಲವೆಡೆ ದಾಳಿ ನಡೆಸಿದ್ದರು. ಮುಂಬೈ ಮೂಲದ ಕಂಪನಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣವೂ ದಾಳಿ ಹಿಂದಿನ ಉದ್ದೇಶವಾಗಿತ್ತು. ಈಗ ಇದೇ ಪ್ರಕರಣದಲ್ಲಿ ವೈಭವ್‌ ಗೆಹ್ಲೋಟ್‌ ಅವರಿಗೆ ಸಮನ್ಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಅಧ್ಯಕ್ಷರಿಗೂ ಇ.ಡಿ ದಾಳಿ ಬಿಸಿ

ವೈಭವ್‌ ಗೆಹ್ಲೋಟ್‌ ಮಾತ್ರವಲ್ಲ ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ್‌ ಸಿಂಗ್‌ಜಿ ದೋಸ್ತಾರಾ ಅವರ ನಿವಾಸ ಸೇರಿ ಏಳು ಕಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ್‌ ಸಿಂಗ್‌ಜಿ ದೋಸ್ತಾರಾ ಅವರ ನಿವಾಸ, ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರ ನಿವಾಸ ಸೇರಿ ಏಳು ಕಡೆ ಇ.ಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. 2022ರಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಕೇಸ್‌ಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತೆಲಂಗಾಣ ಚುನಾವಣೆ: ಪ್ರವಾದಿ ಕುರಿತು ವಿವಾದಿತ ಹೇಳಿಕೆ ನೀಡಿದ್ದ ರಾಜಾ ಸಿಂಗ್‌ಗೆ ಬಿಜೆಪಿ ಟಿಕೆಟ್

ಬಿಜೆಪಿ ವಿರುದ್ಧ ಅಶೋಕ್‌ ಗೆಹ್ಲೋಟ್‌ ಆಕ್ರೋಶ

ಪುತ್ರನಿಗೆ ಇ.ಡಿ ಸಮನ್ಸ್‌ ಹಾಗೂ ಕಾಂಗ್ರೆಸ್‌ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಶೋಕ್‌ ಗೆಹ್ಲೋಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಇ.ಡಿ ದಾಳಿ ಬಗ್ಗೆ ಪದೇಪದೆ ಏಕೆ ಹೇಳುತ್ತೇನೆ ಎಂಬುದಕ್ಕೆ ಈಗ ನಿದರ್ಶನ ದೊರೆತಿದೆ. ನನ್ನ ಪುತ್ರನಿಗೆ ಸಮನ್ಸ್‌ ನೀಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರ ಮನೆ ಮೇಲೆ ದಾಳಿ ನಡೆಸಲಾಗಿದೆ. ರಾಜ್ಯದಲ್ಲಿ ಮಹಿಳೆಯರು, ರೈತರು ಹಾಗೂ ಬಡವರ ಏಳಿಗೆಗೆ ಬಿಜೆಪಿಗೆ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್‌ ನೀಡಿದ ಗ್ಯಾರಂಟಿಗಳನ್ನು ತಡೆಯಲು ಬಿಜೆಪಿ ಹೀಗೆ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version