ನವದೆಹಲಿ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ನಡುವಿನ ಕಾಂಗ್ರೆಸ್ ಗಲಾಟೆಗೆ (Rajasthan Congress Crisis) ರಾಹುಲ್ ಗಾಂಧಿ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಡಿಸೆಂಬರ್ 4ರಂದು ಭಾರತ್ ಜೋಡೋ ಯಾತ್ರೆಯು ರಾಜಸ್ಥಾನ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಈ ಉಭಯ ನಾಯಕರು ಮಂಗಳವಾರ ಮಾಧ್ಯಮಗಳೆದುರು ಬಂದು, ”ನಾವೆಲ್ಲ ಒಗ್ಗಟ್ಟಾಗಿದ್ದೇವೆ,” ಎಂದು ಹೇಳಿಕೊಂಡಿದ್ದಾರೆ. ಸಚಿನ್ ಪೈಲಟ್ ದ್ರೋಹಿ ಎಂದು ಅಶೋಕ್ ಗೆಹ್ಲೋಟ್ ಕರೆದಿದ್ದರು. ಆ ಬಳಿಕ ಇಬ್ಬರು ನಾಯಕರು ಹಾಗೂ ಅವರ ಬೆಂಬಲಿಗರ ಮಧ್ಯೆ ಮಾತಿನ ಸಮರ ನಡೆದಿತ್ತು.
ಭಾರತ್ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಗೆಹ್ಲೋಟ್ ಮತ್ತು ಪೈಲಟ್ ಪರಸ್ಪರ ಶುಭಾಶಯ ಕೋರುತ್ತಿರುವುದನ್ನು ಕಂಡು, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಎರಡೂ ನಾಯಕರ ಕೈಗಳನ್ನು ಹಿಡಿದು, ”ನಾವು ಒಗ್ಗಟ್ಟಾಗಿದ್ದೇವೆ. ಅಶೋಕ್ ಮತ್ತು ಸಚಿನ್ ಪೈಲಟ್ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ ಎಂದು ಹೇಳಿದ್ದಾರೆ,” ಎಂದು ಹೇಳಿದರು. ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ “ಆಸ್ತಿ” ಎಂಬ ರಾಹುಲ್ ಗಾಂಧಿ ಅವರ ಈ ಹಿಂದಿನ ಹೇಳಿಕೆಯನ್ನು ವೇಣುಗೋಪಾಲ್ ಪುನರುಚ್ಚರಿಸಿದರು.
ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆಯನ್ನು ಗರಿಷ್ಠ ಉತ್ಸಾಹದಿಂದ ಸ್ವಾಗತಿಸಲಾಗುವುದು. ಮತ್ತು ಆ ಶಕ್ತಿ ರಾಜಸ್ಥಾನಕ್ಕಿದೆ. ರಾಜಸ್ಥಾನದಲ್ಲಿ ಯಾತ್ರೆ 12 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಸಮಾಜದ ಎಲ್ಲ ವರ್ಗದ ಜನರು ಭಾಗವಹಿಸಲಿದ್ದಾರೆ ಎಂದು ಸಚಿನ್ ಪೈಲಟ್ ಹೇಳಿದರು.
ಇದಕ್ಕೊ ಮೊದಲು ಸೋಮವಾರ ರಾಹುಲ್ ಗಾಂಧಿ ಅವರು ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಇಬ್ಬರು ಕಾಂಗ್ರೆಸ್ ಪಕ್ಷದ ಆಸ್ತಿ ಎಂದು ಹೇಳಿದ್ದರು. ಇಬ್ಬರ ನಡುವಿನ ಮುನಿಸು ಭಾರತ್ ಜೋಡೋ ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ಅದರಂತೆ ಪೈಲಟ್-ಗೆಹ್ಲೋಟ್ ಇಬ್ಬರು ಈ ಮಾಧ್ಯಮಗಳೆದರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ | Gehlot VS Pilot | ʼಸಚಿನ್ʼ ಬಂಡಾಯಕ್ಕೆ ಅಮಿತ್ ಶಾ ʼಪೈಲಟ್ʼ, ಗಂಭೀರ ಆರೋಪ ಮಾಡಿದ ಸಿಎಂ ಗೆಹ್ಲೋಟ್