ಜೈಪುರ, ರಾಜಸ್ಥಾನ: ವಿಧಾನಸಭೆ ಚುನಾವಣೆ ಎದುರು ನೋಡುತ್ತಿರುವ ರಾಜಸ್ಥಾನದಲ್ಲಿ (Rajasthan) ಕಾಂಗ್ರೆಸ್ (Congress) ಮತ್ತೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಕೇಂದ್ರ ಸರ್ಕಾರವು ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ನೀಡುವುದನ್ನು ಸ್ಥಗಿತ ಮಾಡಿದೆ. ಈ ಅವಕಾಶವನ್ನು ಬಳಸಿಕೊಂಡಿರುವ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವು, ರಾಜಸ್ಥಾನದ ಸುಮಾರು 14 ಲಕ್ಷ ಕುಟುಂಬಗಳಿಗೆ ನೆರವಾಗುವ ಯೋಜನೆಯನ್ನು ಪ್ರಕಟಿಸಿದ್ದು, ಪ್ರತಿಯೊಬ್ಬರ ಖಾತೆಗೆ 640 ಸಬ್ಸಿಡಿ ಹಣವನ್ನು ನೀಡಲಿದೆ. ಸೋಮವಾರ ಈ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಹೇಳಲಾಗಿತ್ತು. ಅಂದ ಹಾಗೆ, ಈ ಯೋಜನೆಗೆ ಇಂದಿರಾ ಗಾಂಧಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸ್ಕೀಮ್ (Indira Gandhi Gas Cylinder Subsidy Scheme) ಎಂದು ಹೆಸರಿಡಲಾಗಿದೆ ಎಂದು ಸಿಎ ಅಶೋಕ್ ಗೆಹ್ಲೋಟ್ (CM Ashok Gehlot) ಅವರು ಹೇಳಿದ್ದಾರೆ.
ಇಂದಿರಾ ಗಾಂಧಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸ್ಕೀಮ್‌ನಲ್ಲಿ ಅರ್ಹ ಪ್ರತಿಯೊಂದು ಕುಟುಂಬಕ್ಕೆ 640 ರೂ. ಸಬ್ಸಿಡಿ ಹಣ ದೊರೆಯಲಿದೆ. ರಾಜಸ್ಥಾನದಲ್ಲಿ ಸುಮಾರು 14 ಲಕ್ಷ ಕುಟುಂಬಗಳು ಈ ಯೋಜನೆಗೆ ಅರ್ಹವಾಗಲಿವೆ. ಹಾಗಿದ್ದೂ, ಕೇಂದ್ರ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಅಂಕಿಸಂಖ್ಯೆಗಳನ್ನು ಒದಗಿಸುವಂತೆ ಕೇಳಿಕೊಳ್ಳಲಾಗುವುದು ಎಂದು ಅಶೋಕ್ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಈ ಯೋಜನೆಯಡಿ ಅರ್ಹ ಕುಟುಂಬಗಳಿಗೆ ನೆರವು ಒದಗಿಸಲು ನಮ್ಮ ಹಂತದಲ್ಲಿ ನಾವು ಈ ಸಂಬಂಧ ಮಾಹಿತಿಯನ್ನು ಕಲೆ ಹಾಕಿದ್ದೇವೆ ಎಂದು ಸಿಎಂ ಹೇಳಿದ್ದಾರೆ. 1000 ಕೋಟಿ ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಜೋಧ್‌ಪುರಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ಸಿಎಂ ಗೆಹ್ಲೋಟ್ ಅವರು ಘೋಷಣೆ ಮಾಡಿದರು.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಐದು ಗ್ಯಾರಂಟಿಗಳ ಘೋಷಣೆ ಮಾಡಿ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಅದೇ ರೀತಿಯ ಉಚಿತ ಯೋಜನೆಗಳನ್ನು ರಾಜಸ್ಥಾನದಲ್ಲೂ ಕಾಂಗ್ರೆಸ್ ಜಾರಿ ಮಾಡಲು ಹೊರಟಿದೆ. ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಸಚಿನ್ ಪೈಲಟ್‌ರಿಂದ ಹೊಸ ಪಕ್ಷ, ಜೂನ್ 11ಕ್ಕೆ ಘೋಷಣೆ?
ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಕಾಂಗ್ರೆಸ್‌ನಲ್ಲಿನ ಬಿರುಕು (Rajasthan Congress Crisis) ಮತ್ತುಷ್ಟು ಹೆಚ್ಚಾಗಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (CM Ashok Gehlot) ಜತೆಗೆ ಮುನಿದುಕೊಂಡಿರುವ ಯುವ ನಾಯಕ ಸಚಿನ್ ಪೈಲಟ್ (Sachin Pilot) ಅವರು, ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿದೆ. ಚುನಾವಣೆ ಎರಡ್ಮೂರು ತಿಂಗಳು ಇರುವಾಗಲೇ ತಮ್ಮದೇ ಆದ ಪ್ರಗತಿಶೀಲ ಕಾಂಗ್ರೆಸ್ (Pragatisheel Congress) ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಸಚಿನ್ ಪೈಲಟ್ ಅವರಿಗೆ ಪ್ರಶಾಂತ್ ಕಿಶೋರ್ ನೇತೃತ್ವದ ರಾಜಕೀಯ ಸಲಹಾ ಸಂಸ್ಥೆ ತಜ್ಞ ಸಂಸ್ಥೆ ಐ ಪ್ಯಾಕ್ ನೆರವು ನೀಡುತ್ತಿದೆ ಎನ್ನಲಾಗುತ್ತಿದೆ. ಏಪ್ರಿಲ್ 11ರಂದು ಸಚಿನ್ ಪೈಲಟ್ ಅವರು ಕೈಗೊಂಡಿದ್ದ ಒಂದು ದಿನದ ಸತ್ಯಾಗ್ರಹ ಪ್ಲ್ಯಾನ್ ಕೂಡ ಇದೇ ಸಂಸ್ಥೆಯದ್ದು ಎಂದು ಹೇಳಲಾಗುತ್ತಿದೆ. ವಸಂಧುರಾ ರಾಜೇ ಅವರು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಒತ್ತಾಯಿಸಿ ಸಚಿನ್ ಪೈಲಟ್ ಸತ್ಯಾಗ್ರಹ ನಡೆಸಿದ್ದರು. ಅಜ್ಮೇರ್‌ನಿಂದ ಜೈಪುರದವರೆಗಿನ ಪಾದಯಾತ್ರೆ ಪ್ಲ್ಯಾನ್ ಕೂಡ ಐಪ್ಯಾಕ್‌ನದ್ದೇ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Congress Guarantee: ಬಾಡಿಗೆದಾರರಿಗೆ ಫ್ರೀ ಕರೆಂಟ್ ಶಾಕ್: ಬಾಯಿ ಮಾತು, ಟ್ವೀಟ್‌ನಲ್ಲಷ್ಟೆ ಕಾಂಗ್ರೆಸ್ ಗ್ಯಾರಂಟಿ
ಅದಾಗಲೇ ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸಚಿನ್ ಪೈಲಟ್ ಅವರು, ಜೂನ್ 11ರಂದು ಪ್ರಮುಖ ಘೋಷಣೆ ಮಾಡುವ ಸಾಧ್ಯತೆ ಇದೆ. ಜೂನ್ 11 ಅವರ ತಂದೆ ರಾಜೇಶ್ ಪೈಟಲ್ ಅವರ ಪುಣ್ಯ ತಿಥಿಯೂ ಹೌದು. ಅಂದು ಯಾತ್ರೆಯನ್ನು ಕೈಗೊಳ್ಳಲಿರುವ ಸಚಿನ್ ಪೈಲಟ್ ಅವರು ಹೊಸ ಪಕ್ಷ ಪ್ರಗತಿಶೀಲ ಕಾಂಗ್ರೆಸ್ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.