ನವದೆಹಲಿ: ರಾಜಸ್ಥಾನ(Rajasthan), ಮಧ್ಯ ಪ್ರದೇಶ(Madhya Pradesh), ಛತ್ತೀಸ್‌ಗಢ(Chhattisgarh), ತೆಲಂಗಾಣ (Telangana) ಮತ್ತು ಮಿಜೋರಾಮ್ (Mizoram) ರಾಜ್ಯ ವಿಧಾನಸಭೆ ಚುನಾವಣಾ ವೇಳಾ ಪಟ್ಟಿಯನ್ನು (Assembly Election 2023) ಕೇಂದ್ರ ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ. ನವೆಂಬರ್ 7ರಂದು ಆರಂಭವಾಗಿ ನವೆಂಬರ್ 23ರವರೆಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ರಿಸಲ್ಟ್ ಪ್ರಕಟವಾಗಲಿದೆ. ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಭಾರತೀಯ ಜನತಾ ಪಾರ್ಟಿ(BJP), ರಾಜಸ್ಥಾನ(ಮೊದಲನೇ ಪಟ್ಟಿ), ಮಧ್ಯ ಪ್ರದೇಶ(ನಾಲ್ಕನೇ ಪಟ್ಟಿ), ಛತ್ತೀಸ್‌ಗಢ(ಎರಡನೇ ಪಟ್ಟಿ) ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ(Candidate List). ಸಂಸದರು, ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಿಎಂಗಳಿಗೆ ಟಿಕೆಟ್ ನೀಡಲಾಗಿದೆ.
ಛತ್ತೀಸ್‌ಗಢ ಚುನಾವಣೆ- ಬಿಜೆಪಿಯ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್
ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ರಿಲೀಸ್ ಮಾಡಿದೆ. ಮಾಜಿ ಸಿಎಂ ರಮಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ಅರುಣ್ ಸಾವೋ ಸೇರಿದಂತೆ ಒಟ್ಟು 64 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಮೂರು ಬಾರಿ ಸಿಎಂ ಆಗಿರುವ ರಮಣ್ ಸಿಂಗ್ ಅವರು ರಾಜನಂದಗಾಂವ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಲೋರ್ಮಿ ಕ್ಷೇತ್ರದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಸಾವೋ ಸ್ಪರ್ಧಿಸುತ್ತಿದ್ದರೆ, ಸಂಸದರಾದ ರೇಣುಕಾ ಸಿಂಗ್ ಅವರು ಗೋಮತಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಛತ್ತೀಸ್‌ಗಢ ರಾಜ್ಯ ವಿಧಾನಸಭೆಗೆ ನವೆಂಬರ್ 7 ಮತ್ತು ನವೆಂಬರ್ 17ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ಮಧ್ಯ ಪ್ರದೇಶ; ಬಿಜೆಪಿಯ 4ನೇ ಪಟ್ಟಿ ರಿಲೀಸ್, ಬುದ್ನಿ ಕ್ಷೇತ್ರದಿಂದ ಸಿಎಂ ಸ್ಪರ್ಧೆ
ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ಮೂರು ಪಟ್ಟಿಯನ್ನು ರಿಲೀಸ್ ಮಾಡಿತ್ತು. ಇದೀಗ ಸೋಮವಾರ ನಾಲ್ಕನೇ ಪಟ್ಟಿಯನ್ನು ರಿಲೀಸ್ ಮಾಡದ್ದು, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಅವರು ಬದ್ನಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸೋಮವಾರ ಒಟ್ಟು 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಗೃಹ ಸಚಿವ ನರೋತ್ತಮ ಮಿಶ್ರಾ ಅವರು ದಾತಿಯಾ, ರೆಹ್ಲಿ ಕ್ಷೇತ್ರದಿಂದ ಗೋಪಾಲ್ ಭಾರ್ಗವ್, ನರೇಲಾ ಕ್ಷೇತ್ರದಿಂದ ವಿಶ್ವಾಸ್ ಸಾರಂಗ್, ಸನ್ವೇರ್ ಕ್ಷೇತ್ರದಿಂದ ತುಳಿಸಿರಾಮ್ ಶೀಲವತ್ ಅವರು ಕಣಕ್ಕಿಳಿಯಲಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಮಧ್ಯಪ್ರದೇಶದಲ್ಲಿ ಮುಂಬರುವ ಚುನಾವಣೆಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಈ ಸುದ್ದಿಯನ್ನೂ ಓದಿ: Assembly Election 2023: ಪಂಚ ರಾಜ್ಯ ಚುನಾವಣೆ; ಬಲಾಬಲ ಹೇಗಿದೆ? ಲೋಕಸಭೆಗೆ ಸೆಮಿಫೈನಲ್ ಏಕೆ?
ರಾಜಸ್ಥಾನ- ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, 7 ಸಂಸದರಿಗೆ ಟಿಕೆಟ್!
ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಮೊದಲನೇ ಪಟ್ಟಿಟಯನ್ನು ಸೋಮವಾರ ಬಿಡುಗಡೆ ಮಾಡಿದೆ. ಏಳು ಸಂಸದರು ಸೇರಿದಂತೆ ಒಟ್ಟು 41 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಅಕ್ಟೋಬರ್ 1ರಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆಯೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಝೋತ್ವಾರವನ್ನು ಪ್ರತಿನಿಧಿಸುವ ರಾಜ್ಯವರ್ಧನ್ ರಾಥೋಡ್ ಮತ್ತು ವಿದ್ಯಾಧರ್ ನಗರದಿಂದ ಸಂಸದೆ ದಿಯಾ ಕುಮಾರಿ ಅವರನ್ನು ಬಿಜೆಪಿ ವಿಧಾನಸಭೆ ಚುನಾವಣೆ ಕಣಕ್ಕಿಳಿಸಲಿದೆ. ಇದೇ ವೇಳೆ, ಬಾಬಾ ಬಾಲಕನಾತ್ ಅವರು ತಿಜರಾ ಮತ್ತು ಕಿರೋಡಿ ಲಾಲ್ ಮೀನಾ ಅವರು ಸವಾಯಿ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನವೆಂಬರ್ 23ರಂದು ರಾಜಸ್ಥಾನ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.