Site icon Vistara News

Rajasthan Minister: ರಾಜ್ಯದಲ್ಲಿ ಸ್ತ್ರೀ ಸುರಕ್ಷತೆ ಇಲ್ಲ ಎಂದ ರಾಜಸ್ಥಾನ ಸಚಿವನ ವಜಾ; ಚುನಾವಣೆ ಮೊದಲೇ ‘ಕೈ’ ವಿಲವಿಲ

Ashok Gehlot And Rajendra Singh Gudha

Rajasthan minister Rajendra Singh Gudha sacked for questioning own government on women safety

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ. ಮತ್ತೆ ಅಧಿಕಾರದ ಗದ್ದುಗೆಯೇರಲು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಉಚಿತ ಯೋಜನೆಗಳ ಮೂಲಕ ಜನರನ್ನು ಹಿಡಿದಿಡಲು ಯತ್ನಿಸುತ್ತಿದ್ದಾರೆ. ಇದರ ಮಧ್ಯೆಯೇ, ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಯಾವಾಗ ಬೇಕಾದರೂ ಬಂಡಾಯದ ಬಾವುಟ ಬೀಸಬಹುದು ಎಂಬ ಚಿಂತೆ ಗೆಹ್ಲೋಟ್‌ ಅವರಿಗಿದೆ ಇದೆ. ಇದರ ಬೆನ್ನಲ್ಲೇ, ತಮ್ಮದೇ ಪಕ್ಷದ ನಾಯಕ, ಸಂಪುಟ ಸಚಿವ ರಾಜೇಂದ್ರ ಸಿಂಗ್‌ ಗುಢಾ (Rajasthan Minister) ಅವರು ರಾಜಸ್ಥಾನದಲ್ಲಿ ಮಹಿಳಾ ಸುರಕ್ಷತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಅಶೋಕ್ ಗೆಹ್ಲೋಟ್‌ ಅವರು ಗುಢಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ.

ಸಚಿವ ಗುಢಾ ಹೇಳಿದ್ದೇನು?

ರಾಜಸ್ಥಾನದ ವಿಧಾನಸಭೆ ಕಲಾಪದ ವೇಳೆ ಮಣಿಪುರ ಹಿಂಸಾಚಾರದ ವಿಷಯ ಪ್ರಸ್ತಾಪಿಸಲಾಯಿತು. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದನ್ನು ಖಂಡಿಸಲಾಯಿತು. ಇದೇ ವೇಳೆ ಮಾತನಾಡಿದ ಗುಢಾ, “ವಾಸ್ತವದಲ್ಲಿ ನಾವು ಕೂಡ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವಲ್ಲಿ ವಿಫಲರಾಗಿದ್ದೇವೆ. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಜಾಸ್ತಿಯಾಗಿದೆ. ಮಣಿಪುರದ ಕುರಿತು ಮಾತನಾಡುವ ನಾವು ಇದರ ಕುರಿತು ಕೂಡ ಗಮನ ಹರಿಸಬೇಕು” ಎಂದು ಹೇಳಿದರು.

ರಾಜೇಂದ್ರ ಸಿಂಗ್‌ ಗುಢಾ ಅವರು ತಮ್ಮದೇ ಸರ್ಕಾರದ ವೈಫಲ್ಯದ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತಲೇ ಸಂಚಲನ ಸೃಷ್ಟಿಯಾಯಿತು. ಪ್ರತಿಪಕ್ಷಗಳು ಆಡಳಿತ ಸರ್ಕಾರದ ಮೇಲೆ ಮುಗಿಬಿದ್ದವು. ಸರ್ಕಾರದ ವೈಫಲ್ಯವನ್ನು ಕೂಡ ಟೀಕಿಸಿದವು. ಇದರಿಂದಾಗಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಸಚಿವ ರಾಜೇಂದ್ರ ಸಿಂಗ್‌ ಗುಢಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಮುಖ್ಯಮಂತ್ರಿ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಇದನ್ನೂ ಓದಿ: ಪಾರ್ಥ ಚಟರ್ಜಿಯನ್ನು ಸಂಪೂರ್ಣ ಕೈಬಿಟ್ಟ ಮಮತಾ ಬ್ಯಾನರ್ಜಿ; ಪಕ್ಷದಿಂದಲೇ ಅಮಾನತು

ಸತ್ಯ ಹೇಳಿದ್ದಕ್ಕೆ ಶಿಕ್ಷೆ ಎಂದ ಬಿಜೆಪಿ

ರಾಜಸ್ಥಾನ ಸಚಿವ ಗುಢಾ ಅವರನ್ನು ವಜಾಗೊಳಿಸುತ್ತಲೇ ಬಿಜೆಪಿಯು ಆಡಳಿತ ಪಕ್ಷವನ್ನು ಟೀಕಿಸಿದೆ. “ರಾಜಸ್ಥಾನದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂದು ಸತ್ಯ ಹೇಳಿದ ಸಚಿವ ಗುಢಾ ಅವರಿಗೆ ಶಿಕ್ಷೆ ನೀಡಿದೆ” ಎಂದು ಕುಟುಕಿದೆ. ಅತ್ತ, ಸಚಿವ ಸ್ಥಾನದಿಂದ ವಜಾಗೊಂಡ ಬಳಿಕವೂ ಸುದ್ದಿಗಾರರೊಂದಿಗೆ ಮಾತನಾಡಿದ ಗುಢಾ, “ನಾನು ವಾಸ್ತವಾಂಶವನ್ನು ಬಿಚ್ಚಿಟ್ಟಿದ್ದೇನೆ. ಇದೇ ಕಾರಣಕ್ಕಾಗಿ ನನ್ನನ್ನು ವಜಾಗೊಳಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಸಚಿನ್‌ ಪೈಲಟ್‌ ಅವರು ಕೂಡ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿದ್ದರು. ಭ್ರಷ್ಟಾಚಾರಿಗಳ ವಿರುದ್ಧ ಅಶೋಕ್‌ ಗೆಹ್ಲೋಟ್‌ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು. ರಾಜಸ್ಥಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

Exit mobile version