Site icon Vistara News

ಹುಟ್ಟುಹಬ್ಬದ ಶುಭದಿನದಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಜನ್‌ಲಾಲ್ ಶರ್ಮಾ

Bhajan Lal Sharma

ಜೈಪುರ: ಅಚ್ಚರಿಯ ಆಯ್ಕೆಯಂತೆ ರಾಜಸ್ಥಾನದ ಮುಖ್ಯಮಂತ್ರಿ (Chief Minister of Rajasthan) ಸ್ಥಾನಕ್ಕೆ ಆಯ್ಕೆಯಾದ ಭಜನ್‌ಲಾಲ್ ಶರ್ಮಾ (Bhajanlal Sharma) ಅವರು ಇಂದು(ಶುಕ್ರವಾರ) ರಾಜಸ್ಥಾನದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೈಪುರದ ರಾಮ್ನಿವಾಸ್ ಬಾಗ್‌ನಲ್ಲಿರುವ ಆಲ್ಬರ್ಟ್ ಹಾಲ್ ಮುಂದೆ ಪ್ರಮಾಣವಚನ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಭಾರತೀಯ ಜನತಾ ಪಕ್ಷದ ಅಚ್ಚರಿಯ ನಡೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಭಜನ್‌ಲಾಲ್ ಶರ್ಮಾಗೆ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಶುಕ್ರವಾರ, ಡಿಸೆಂಬರ್ 15 ರಂದು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗಿಯಾಗಿದ್ದರು.

56 ವರ್ಷದ ಭಜನ್ ಲಾಲ್ ಶರ್ಮಾ ಅವರು ಸಂಗನೆರ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಮೊದಲ ಅವಕಾಶದಲ್ಲಿಯೇ ಅವರು ಸಿಎಂ ಸ್ಥಾನಕ್ಕೇರಿದ್ದಾರೆ. ಭಜನ್ ಲಾಲ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಸ್ನಾತಕ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರು ಒಟ್ಟು 1.5 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಈ ಪೈಕಿ, 43.6 ಲಕ್ಷ ಚರಾಸ್ತಿ ಮತ್ತು 1 ಕೋಟಿ ರೂ. ಸ್ಥಿರಾಸ್ತಿ ಇದೆ. ಒಟ್ಟು ಅವರು 11.1 ಲಕ್ಷ ರೂ. ಆದಾಯವನ್ನು ಘೋಷಣೆ ಮಾಡಿದ್ದು, ಈ ಪೈಕಿ 6.9 ಲಕ್ಷ ರೂ. ಸ್ವಂತ ಆದಾಯವಾಗಿದೆ.

ಇದನ್ನೂ ಓದಿ Bhajanlal Sharma: ಯಾರಿವರು ರಾಜಸ್ಥಾನದ ನೂತನ ಸಿಎಂ ಭಜನ್‌ಲಾಲ್ ಶರ್ಮಾ?

ಭಜನ್‌ಲಾಲ್ ಶರ್ಮಾ ಅವರು ಮೂಲತ ಭಾರತಪುರದವರು. ಆದರೆ, ಪಾರ್ಟಿಯು ಅವರಿಗೆ ಆ ಕ್ಷೇತ್ರದಲ್ಲಿ ಟಿಕೆಟ್ ನೀಡಿರಲಿಲ್ಲ. ಬದಲಿಗೆ ಅವರಿಗೆ ಸಂಗನೇರ್ ಕ್ಷೇತ್ರದಿಂದ ಟಿಕೆಟ್ ನೀಡಿತ್ತು ಮತ್ತು ಗೆದ್ದು ಬಂದರು.

ಭಜನ್‌ಲಾಲ್ ಅವರು ಸಂಪೂರ್ಣವಾಗಿ ಸಂಘದ ಮನುಷ್ಯ. ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿದ ನಂತರ ಬಿಜೆಪಿ ತೆಗೆದುಕೊಂಡ ರಾಜ್ಯದಲ್ಲಿ ಬಿಜೆಪಿಯ ದೀರ್ಘಾವಧಿಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಅವರು ಕೂಡ ಒಬ್ಬರು. ಭಜನ್ ಲಾಲ್ ಅವರು ರಾಜಕೀಯ ಪ್ರವೇಶಿಸುವ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಇದ್ದರು. ರಾಜಸ್ಥಾನದಲ್ಲಿ ನಡೆಯುವ ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಅವರಿರುತ್ತಾರೆ. ಮೇಲ್ಜಾತಿ ನಾಯಕನಾಗಿದ್ದರೂ ಲೋ ಪ್ರೊಫೈಲ್‌ ಮೆಂಟೇನ್ ಮಾಡಿದ್ದಾರೆ.

Exit mobile version