ಚೆನ್ನೈ: ಯಾವುದೇ ವಯಸ್ಸಿನವರಾಗಿರಲಿ, ಸನ್ಯಾಸಿ ಅಥವಾ ಯೋಗಿಯ ಕಾಲಿಗೆ ಬೀಳುವುದು ನನ್ನ ಅಭ್ಯಾಸ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಹೇಳಿದ್ದಾರೆ. ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ ವಿವಾದದ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ನಟ ಈ ರೀತಿ ಹೇಳಿಕೆ ನೀಡಿದ್ದಾರೆ.
“ಸನ್ಯಾಸಿಯಾಗಿರಲಿ ಅಥವಾ ಯೋಗಿಯಾಗಿರಲಿ, ಅವರು ನನಗಿಂತ ಚಿಕ್ಕವರಾಗಿದ್ದರೂ ಅವರ ಕಾಲಿಗೆ ಬೀಳುವುದು ನನ್ನ ಅಭ್ಯಾಸ. ಅದನ್ನೇ ನಾನು ಮಾಡಿದ್ದೇನೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಿರಿಯ ನಟನ ಕ್ರಮವು ಆನ್ ಲೈನ್ ಬಿರುಗಾಳಿಯನ್ನು ಎಬ್ಬಿಸಿತ್ತು, ವಿಶೇಷವಾಗಿ ತಮಿಳುನಾಡಿನಲ್ಲಿ, 72 ವರ್ಷದ ನಟ ತನಗಿಂತ ಕಿರಿಯ ಯುಪಿ ಮುಖ್ಯಮಂತ್ರಿಯ ಪಾದಗಳನ್ನು ಮುಟ್ಟುವುದು ಸರಿಯೇ ಎಂದು ಅನೇಕರು ಕೇಳಿದ್ದರು. ಇದಕ್ಕೆ ಅವರು ತಾವು ಯೋಗಿಗಳ ಕಾಲು ಹಿಡಿಯುವುದು ಸಾಮಾನ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ ;Suprestar Rajnikanth : ಹಳೆ ಗೆಳೆಯ ಅಖಿಲೇಶ್ ಯಾದವ್ ಭೇಟಿ ಮಾಡಿದ ರಜನಿಕಾಂತ್
ತಮ್ಮ ಇತ್ತೀಚಿನ ಚಿತ್ರ ‘ಜೈಲರ್’ ಅನ್ನು ಭರ್ಜರಿಯಾಗಿ ಗೆಲ್ಲಿಸಿದ್ದಕ್ಕಾಗಿ ರಜನೀಕಾಂತ್ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.
ಯಾವಾಗ ಕಾಲಿಡಿದ್ದು?
ಜೈಲರ್ ಸಿನಿಮಾ (Jailer Movie) ಯಶಸ್ಸಿನ ಮೇಲೆ ತೇಲುತ್ತಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (UP CM Yogi Adityanath) ಅವರನ್ನು ಭೇಟಿ ಮಾಡಿದ್ದರು.. ಶುಕ್ರವಾರ ರಾತ್ರಿ ಲಕ್ನೋಗೆ (Lucknow City) ಆಗಮಿಸಿದ ರಜನಿಕಾಂತ್ ಅವರು ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡಿದ್ದರು. ಯೋಗಿ ಆದಿತ್ಯನಾಥ ಅವರ ಜತೆಗೆ ರಜನಿಕಾಂತ್ ಅವರು ಜೈಲರ್ ಸಿನಿಮಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ, ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಕೂಡ ಜತೆಗಿದ್ದರು.
ಲಕ್ನೋದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ರಜನಿಕಾಂತ್ ಅವರು ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೆ ಎರಗಿ, ನಮಸ್ಕರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಧ್ಯೆ, ರಜನಿಕಾಂತ್ ಅವರು, ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸಿ ಕುರಿತು ಸಂತೋಷ ಹೆಚ್ಚಿಕೊಂಡಿದ್ದಾರೆ. ಇದೆಲ್ಲ ದೇವರ ಆಶೀರ್ವಾದ. ಹಾಗಾಗಿ, ಸಿನಿಮಾ ಯಶಸ್ವಿಯಾಗಿ ಪ್ರದರ್ಶವಾಗುತ್ತಿದೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಹಿಂದೆ ರಜನಿಕಾಂತ್ ರಾಂಚಿಯಲ್ಲಿದ್ದರು. ಆಗಸ್ಟ್ 18ರಂದು ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ರಾಂಚಿಯ ಯಗೋಡಾ ಆಶ್ರಮದಲ್ಲಿ ಒಂದು ಗಂಟೆ ಧ್ಯಾನ ಮಾಡಿ ಬಳಿಕ ಜಾರ್ಖಂಡ್ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದರು.
ಸಿನಿಮಾ ರಿಲೀಸ್ ಆಗಿ ಶುಕ್ರವಾರ 9ನೇ ದಿನ. ಅಂದು ಸಿನಿಮಾ ಭಾರತದಲ್ಲಿ 10 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ವಾರದ ಜೈಲರ್ ಕಲೆಕ್ಷನ್ 235.65 ಕೋಟಿ ಇದ್ದು ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಸಿನಿಮಾದ ತಮಿಳು ವರ್ಷನ್ 186.05 ಕೋಟಿ ಗಳಿಸಿದ್ದು ತೆಲುಗಿನಲ್ಲಿ 46.99 ಕೋಟಿ ಗಳಿಸಿದೆ. ಕನ್ನಡ ಹಾಗೂ ಹಿಂದಿ 1.9 ಕೋಟಿ ಗಳಿಸಿದೆ. ವಿಶ್ಲೇಷಕ ಮನೋಬಲ ವಿಜಯಬಾಲನ್ ಪ್ರಕಾರ ಈ ಸಿನಿಮಾದ ಸದ್ಯದ ಒಟ್ಟು ಕಲೆಕ್ಷನ್ 470.17 ಕೋಟಿ ರೂಪಾಯಿ.
ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಜತೆ ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲರ್ ಮುಂದುವರಿದ (jailer 2) ಭಾಗಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ಕಾಲಿವುಡ್ ಪವರ್ ಸ್ಟಾರ್ ದಳಪತಿ ವಿಜಯ್ (thalapathy Vijay) ಕೂಡ ಕಣಕ್ಕಿಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.