ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಡಿಸೆಂಬರ್ 9ರಂದು ಸಂಘರ್ಷ ನಡೆದ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ರಾಜನಾಥ್ ಸಿಂಗ್ ಅವರೇ ಸಂಘರ್ಷದ ಕುರಿತು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ, “ಚೀನಾ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಫೌಂಡೇಷನ್‌ಗೆ (Rajiv Gandhi Foundation) 1.35 ಕೋಟಿ ರೂ. ದೇಣಿಗೆ ಸಂದಾಯವಾಗಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.
ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾ, ಕಾಂಗ್ರೆಸ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದರು. “ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ರಾಜೀವ್ ಗಾಂಧಿ ಫೌಂಡೇಷನ್‌ನ ಪರವಾನಗಿ ರದ್ದುಗೊಳಿಸಿದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುವುದನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಇಂತಹ ಬೇಡಿಕೆ ಇಟ್ಟಿದೆ. ಚೀನಾ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಫೌಂಡೇಷನ್‌ಗೆ 1.35 ಕೋಟಿ ರೂ. ಸಂದಾಯವಾಗಿದೆ. ಎಫ್‌ಸಿಆರ್‌ಎ ನಿಯಮ ಉಲ್ಲಂಘಿಸಿದ ಕಾರಣ ಫೌಂಡೇಷನ್‌ನ ಪರವಾನಗಿಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದೆ” ಎಂದು ತಿಳಿಸಿದರು. ಎಫ್‌ಸಿಆರ್‌ಎ ನಿಯಮ ಉಲ್ಲಂಘನೆ ಕಾರಣ ಇತ್ತೀಚೆಗೆ ಸೋನಿಯಾ ಗಾಂಧಿ ಒಡೆತನದ ರಾಜೀವ್ ಗಾಂಧಿ ಫೌಂಡೇಷನ್‌ನ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಒಂದಿಂಚೂ ಜಾಗ ಬಿಡಲ್ಲ
ಚೀನಾದಿಂದ ಭೂಮಿ ಆಕ್ರಮಣ ಕುರಿತು ಮಾತನಾಡಿದ ಅಮಿತ್ ಶಾ, “ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇರುವವರೆಗೆ ಭಾರತದ ಒಂದಿಂಚು ಭೂಮಿಯೂ ಬೇರೆಯವರ ಪಾಲಾಗಲು ಬಿಡುವುದಿಲ್ಲ. ಅಷ್ಟಕ್ಕೂ, ಜವಾಹರ ಲಾಲ್ ನೆಹರು ಅವರು ಚೀನಾ ಮೇಲಿನ ಪ್ರೀತಿಯಿಂದಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯತ್ವ ಸಿಗಲಿಲ್ಲ” ಎಂದು ಆರೋಪಿಸಿದರು.
ಇದನ್ನೂ ಓದಿ | ಭಾರತ-ಚೀನಾ ಸಂಘರ್ಷ; ಚೀನಾ ಸೈನಿಕರನ್ನು ನಮ್ಮ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು ಎಂದ ರಾಜನಾಥ್ ಸಿಂಗ್