Site icon Vistara News

Ram Mandir: ರಾಮಮಂದಿರದ ‘ಕ್ರೆಡಿಟ್’‌ ರಾಜೀವ್‌ ಗಾಂಧಿಗೂ ನೀಡಿ; ಕಮಲ್‌ ನಾಥ್‌ ಆಗ್ರಹ!

Kamal Nath On Ram Mandir

Rajiv Gandhi opened locks at Babri site: Kamal Nath contests BJP claims on Ram Mandir

ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ (Ram Mandir) ಉದ್ಘಾಟನೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2024ರ ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ, “ರಾಮಮಂದಿರ ನಿರ್ಮಾಣದ ಶ್ರೇಯಸ್ಸನ್ನು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi) ಅವರಿಗೂ ಕೊಡಬೇಕು” ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಿಎಂ ಕಮಲ್ ನಾಥ್‌ ಆಗ್ರಹಿಸಿದ್ದಾರೆ. ಇದು ಈಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

“ರಾಮಮಂದಿರ ನಿರ್ಮಾಣದ ಶ್ರೇಯಸ್ಸನ್ನು ಬಿಜೆಪಿ ಮಾತ್ರ ತೆಗೆದುಕೊಳ್ಳುವುದು ಸರಿಯಲ್ಲ. ಇದರ ಶ್ರೇಯಸ್ಸು ರಾಜೀವ್‌ ಗಾಂಧಿ ಅವರಿಗೂ ಸಲ್ಲಬೇಕು. ರಾಮಮಂದಿರವು ಯಾವುದೇ ಒಂದು ಪಕ್ಷಕ್ಕೆ ಮೀಸಲು ಅಲ್ಲ. ಅದು ಇಡೀ ದೇಶಕ್ಕೆ ಸಲ್ಲಬೇಕು. ಬಾಬ್ರಿ ಮಸೀದಿಯಲ್ಲಿ ತಾತ್ಕಾಲಿಕ ದೇವಾಲಯದ ಬಾಗಿಲನ್ನು ತೆರೆದಿದ್ದೇ ರಾಜೀವ್‌ ಗಾಂಧಿ ಅವರು. ಆದರೆ, ಬಿಜೆಪಿಯು ರಾಜೀವ್‌ ಗಾಂಧಿ ಅವರಿಗೆ ಸರಿಯಾದ ಕ್ರೆಡಿಟ್‌ ಕೊಟ್ಟಿಲ್ಲ” ಎಂದು ಕಮಲ್‌ ನಾಥ್‌ ಹೇಳಿದ್ದಾರೆ.

ರಾಮಮಂದಿರ ಟ್ರಸ್ಟ್‌ನಿಂದ ಮೋದಿ ಅವರಿಗೆ ಮಂದಿರ ಉದ್ಘಾಟನೆಗೆ ಆಹ್ವಾನ.

ತಿರುಗೇಟು ಕೊಟ್ಟ ಅಮಿತ್‌ ಶಾ

ಕಮಲ್‌ ನಾಥ್‌ ಅವರ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ಕೊಟ್ಟಿದ್ದಾರೆ. “ನಮಗೆ ಜನ ಮಾತ್ರ ಮುಖ್ಯ. ರಾಮಮಂದಿರ ನಿರ್ಮಾಣದ ಕ್ರೆಡಿಟ್‌ಅನ್ನು ನಾವು ತೆಗೆದುಕೊಂಡಿಲ್ಲ. ಹೀಗಿರುವಾಗ ಕಮಲ್‌ ನಾಥ್‌ ಅವರು ರಾಜೀವ್‌ ಗಾಂಧಿ ಅವರಿಗೆ ಹೇಗೆ ಶ್ರೇಯಸ್ಸು ನೀಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ.

ಚಿನ್ನಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. “ಚಿನ್ನಲೇಪಿತ ಅಮೃತಶಿಲೆಯ ಸಿಂಹಾಸನವು 8 ಅಡಿ ಎತ್ತರ, 3 ಅಡಿ ಎತ್ತರ ಹಾಗೂ 4 ಅಡಿ ಅಗಲ ಇರಲಿದೆ. ಇದನ್ನು ರಾಜಸ್ಥಾನದ ಕಲಾವಿದರೊಬ್ಬರು ವಿನ್ಯಾಸ ಮಾಡಿದ್ದಾರೆ. ಡಿಸೆಂಬರ್‌ 15ರಂದು ಚಿನ್ನಲೇಪಿತ ಸಿಂಹಾಸನವು ಅಯೋಧ್ಯೆ ತಲುಪಲಿದೆ. ಈಗಾಗಲೇ ಮಂದಿರದ ಗರ್ಭಗುಡಿ ನಿರ್ಮಾಣ ಪೂರ್ಣಗೊಂಡಿದೆ. ಡಿಸೆಂಬರ್‌ 15ರ ವೇಳೆಗೆ ನೆಲಮಹಡಿ ಪೂರ್ಣಗೊಳ್ಳಲಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸದಸ್ಯ ಅನಿಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಅರ್ಚಕರು, ಸಿಬ್ಬಂದಿ ಸಂಬಳ 40% ಹೆಚ್ಚಳ; ಇವರ ವೇತನ ಎಷ್ಟು?

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version