Site icon Vistara News

Peace Accord: ಕೇಂದ್ರ, ಅಸ್ಸಾಮ್‌ ಸರ್ಕಾರದ ಜತೆಗೆ ಶಾಂತಿ ಒಪ್ಪಂದಕ್ಕೆ ಉಲ್ಫಾ ಸಹಿ!

Rajkhowa-led ULFA faction signs peace accord with center and assam Government

ನವದೆಹಲಿ: ಮಾತುಕತೆ ಪರವಾಗಿರುವ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (United Liberation Front of Asom- ULFA) ಬಣವೊಂದು ಕೇಂದ್ರ ಸರ್ಕಾರ (Central Government) ಹಾಗೂ ಅಸ್ಸಾಮ್ ಸರ್ಕಾರದ (Assam Government) ಜತೆಗೆ ಶಾಂತಿ ಒಪ್ಪಂದಕ್ಕೆ (Peace Accord) ಸಹಿ ಹಾಕಿದೆ. ಈ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಹಾಗೂ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Assam CM himanta biswa sarma) ಅವರು ಹಾಜರಿದ್ದರು. ಇದರೊಂದಿಗೆ ಉಲ್ಪಾದ ಈ ಬಣವು ಶಸ್ತ್ರ ತ್ಯಾಗ ಮಾಡಿ, ಮುಖ್ಯ ವಾಹಿನಿಯ ಜತೆಗೆ ಬೆರೆಯಲು ನಿರ್ಧರಿಸಿದೆ.

ಅರಬಿಂದಾ ರಾಜ್‌ಖೋವಾ ನೇತೃತ್ವದ ಬಣದೊಂದಿಗೆ ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಿಂದ ಬೇಷರತ್ ಮಾತುಕತೆ ನಡೆಸುತ್ತಿದೆ. ಅಸ್ಸಾಮ್‌ನಲ್ಲಿ ದಶಕಗಳಿಂದ ಬಂಡಾಯದ ಹಿಂಸಾಚಾರ ನಡೆಯುತ್ತಿದ್ದು, ಈ ಒಪ್ಪಂದ ಮೂಲಕ ಈ ಹಿಂಸಾಚಾರಕ್ಕೆ ಅಂತ್ಯ ಹಾಡುವ ಸಾಧ್ಯತೆಗಳಿವೆ. ಆದರೆ, ಉಲ್ಫಾದ ಪರೇಶ್ ಬರುವಾ ನೇತೃತ್ವದ ಬಣ ಈಗಲೂ ಹಿಂಸಾಚಾರ ಪ್ರೇರಿತ ಉಗ್ರ ಬಂಡಾಯದಲ್ಲಿ ನಂಬಿಕೆ ಇಟ್ಟಿದ್ದು, ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದೆ.

ಬರುವಾ ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. 1979 ರಲ್ಲಿ ಸಾರ್ವಭೌಮ ಅಸ್ಸಾಂನ ಬೇಡಿಕೆಗಾಗಿ ಉಲ್ಫಾವನ್ನು ಸಂಘಟನೆಯನ್ನು ರಚಿಸಲಾಯಿತು. ವಿಧ್ವಂಸಕ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ 1990 ರಲ್ಲಿ ಭಾರತ ಸರ್ಕಾರವು ಈ ಸಂಘಟನೆಯನ್ನು ನಿಷೇಧಿಸಿತು.

ಮತ್ತೊಂದೆಡೆ, ರಾಜ್‌ಖೋವಾ ನೇತೃತ್ವದ ಉಲ್ಫಾ ಬಣವು 2011ರ ಸೆಪ್ಟೆಂಬರ್ 3ರಿಂದ ಕೇಂದ್ರ ಸರ್ಕಾರದ ಜತೆಗೆ ನಿರಂತರವಾಗಿ ಶಾಂತಿ ಒಪ್ಪಂದದ ಮಾತುಕತೆ ನಡೆಸುತ್ತಿದೆ. ಉಲ್ಫಾದ ಪ್ರಮುಖ ಬಣವೊಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರುವುದು ಖುಷಿ ತಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಇದು ಖುಷಿ ಕೊಡುವ ಸಂಗತಿಯಾಗಿದೆ. ಅಸ್ಸಾಮ್‌ನ ಭವಿಷ್ಯಕ್ಕೆ ಇದು ಉತ್ತಮ ದಿನವಾಗಿದೆ. ದಶಕಗಳಿಂದಲೂ ಅಸ್ಸಾಮ್ ಮತ್ತು ಈಶಾನ್ಯ ಭಾರತದ ರಾಜ್ಯಗಳು ಹಿಂಸಾಚಾರವನ್ನು ಎದುರಿಸುತ್ತಿವೆ. 2014ರಲ್ಲಿ ಮೋದಿ ಅವರು ಪ್ರಧಾನಿಯಾದ ಬಳಿಕ ದಿಲ್ಲಿ ಮತ್ತು ಈಶಾನ್ಯ ಭಾರತದ ರಾಜ್ಯಗಳ ನಡುವೆ ಉಂಟಾಗಿದ್ದ ಕಂದಕವನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Exit mobile version