Site icon Vistara News

Rajouri Terror Attack | ಉಗ್ರದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ; ಇಂದು ರಾಜೌರಿ ಬಂದ್​​ಗೆ ಕರೆ

Rajouri terror attack 4 Died

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಉಗ್ರದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಗಾಯಗೊಂಡು ರಾಜೌರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದವರೊಬ್ಬರು ಮೃತಪಟ್ಟಿದ್ದಾರೆ. ಇನ್ನೂ 9 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಆದರೆ ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇಲ್ಲಿ ಚಿಕಿತ್ಸೆ ಸಾಧ್ಯವೇ ಇಲ್ಲ ಎಂದವರನ್ನೆಲ್ಲ ಜಮ್ಮುವಿಗೆ ಏರ್​ಲಿಫ್ಟ್​ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಉಗ್ರದಾಳಿಗೆ ಬಲಿಯಾದವರನ್ನು ದೀಪಕ್​ ಕುಮಾರ್​, ಸತೀಶ್​ ಕುಮಾರ್​, ಪ್ರೀತಮ್​ ಲಾಲ್​ ಮತ್ತು ಶಿವಪಾಲ್​ ಎಂದು ಗುರುತಿಸಲಾಗಿದೆ.

ರಾಜೌರಿ ಬಳಿಯ ರಾಮಮಂದಿರದ ಸಮೀಪ ಇರುವ ಮೂರು ಮನೆಗಳ ಮೇಲೆ ಜನವರು 1ರಂದು ಗುಂಡಿನ ದಾಳಿ ನಡೆಸಿದ್ದರು. ಇಬ್ಬರು ಭಯೋತ್ಪಾದಕರು ಕಂಡಕಂಡಲ್ಲಿ ಗುಂಡಿನ ಸುರಿಮಳೆ ಸುರಿಸಿದ್ದರು. ತಪ್ಪಿಸಿಕೊಂಡಿರುವ ಅವರಿಬ್ಬರಿಗಾಗಿ ಭದ್ರತಾ ಪಡೆಗಳು ಶೋಧಕಾರ್ಯಾಚರಣೆ ಪ್ರಾರಂಭಿಸಿವೆ.

ರಾಜೌರಿಯಲ್ಲಿ ಉಗ್ರದಾಳಿ ನಡೆದು ಈಗ 4 ಮಂದಿ ಮೃತಪಟ್ಟ ಬೆನ್ನಲ್ಲೇ ಇಡೀ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ವಿವಿಧ ಸಂಘಟನೆಗಳು ಪ್ರತಿಭಟನೆ-ಬಂದ್​ಗೆ ಕರೆ ನೀಡಿವೆ. ಉಗ್ರರ ವಿರುದ್ಧ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿವೆ. ಜನರಂತೂ ಮನೆಯಿಂದ ಹೊರಬರಲೂ ಭಯಪಡುತ್ತಿದ್ದಾರೆ. ಈ ಮಧ್ಯೆ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಎದುರು ಒಂದಷ್ಟು ಜನರ ಗುಂಪು ನೆರೆದಿದ್ದು, ಅವರೆಲ್ಲ ಪಾಕಿಸ್ತಾನ ಮತ್ತು ಭಯೋತ್ಪಾದನೆ ವಿರುದ್ಧದ ಘೋಷಣಾ ಬರಹ ಇರುವ ಪೋಸ್ಟರ್​ಗಳನ್ನು ಹಿಡಿದು, ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Terror Attack In Kashmir | ಕಾಶ್ಮೀರದ ರಾಮ ಮಂದಿರ ಬಳಿ ಉಗ್ರರ ದಾಳಿ, ಮೂವರ ಸಾವು, 6 ಮಂದಿಗೆ ಗಾಯ

Exit mobile version