Site icon Vistara News

Parliament Budget Session: ಅದಾನಿ ವಿಷಯ ಕೆಲಸಕ್ಕೆ ಬಾರದ ಚರ್ಚೆ, ಮೋದಿಯನ್ನು ಹೊಗಳಿ ಎಂದು ಕನ್ನಡದಲ್ಲೇ ಮಾತನಾಡಿದ ಜಗ್ಗೇಶ್

Rajya Sabha member Jaggesh speaks in Kannada and requested opposition to appreciate modi

ಬೆಂಗಳೂರು: ಈ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಎಂದು ರಾಜ್ಯಸಭೆಯ ಸದಸ್ಯರೂ ಆಗಿರುವ ನಟ ಜಗ್ಗೇಶ್ ಗುರುವಾರ ಹೇಳಿದರು. ಅಲ್ಲದೇ ಅದಾನಿ ವಿಷಯವು ಕೆಲಸಕ್ಕೆ ಬಾರದ ಚರ್ಚೆ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ರಾಜ್ಯಸಭೆಯಲ್ಲಿ ಅವರು ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು(Parliament Budget Session:).

ಕುವೆಂಪು ಅವರ ಎಲ್ಲಾದರೂ ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು…. ಸಾಲುಗಳೊಂದಿಗೆ ಮಾತು ಆರಂಭಿಸಿದ ಅವರು, ಸದನದಲ್ಲಿ ನಾನು ಬೆಳಗ್ಗೆಯಿಂದ ತಾಳ್ಮೆಯಿಂದ ಕೇಳುತ್ತಿದ್ದೇನೆ, ಕಾಯುತ್ತಿದ್ದೇನೆ. ಮೋದಿ ಅವರು ಭವ್ಯ ಭಾರತದ ಭವಿಷ್ಯಕ್ಕಾಗಿ ಅವರು ಪಡುತ್ತಿರುವ ಶ್ರಮ ಅಸಾಧಾರಣವಾಗಿದೆ. ನಾನು ಈ ದೇಶದ ಸಾಮಾನ್ಯ ಪ್ರಜೆಯಾಗಿ ಯೋಚನೆ ಮಾಡುತ್ತಿದ್ದೆ. ಅವರು ಮಾಡುತ್ತಿರುವ ಕೆಲಸಕ್ಕೆ ಮೋದಿ ಅವರಿಗೆ ವಂದನೆ, ಅಭಿನಂದನೆ ದೊರೆಯುತ್ತಿದೆ ಎಂದು ಭಾವಿಸಿದ್ದೆ. ಆದರೆ, ಯಾವುದೋ ಕೆಲಸಕ್ಕೆ ಬಾರದ ಅದಾನಿ… ಅದಾನಿ.. ಅದಾನಿ… ಅದಾನಿ… ಎಂದು ಹೇಳುವ ಮಾತಿಗೆ ಸದನದಲ್ಲಿ ಮನ್ನಣೆ ಇಲ್ಲ ಎಂದು ಹೇಳಿದರು.

ರಾಷ್ಟ್ರಪತಿಗಳ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವವೇ ಮೆಚ್ಚುವಂಥ ಕೆಲಸ ಮಾಡುತ್ತಿರುವ ಮೋದಿ ಅವರಿಗೆ ಪ್ರಶಂಸೆ ನೀಡಬೇಕು. ಅದು ಬಿಟ್ಟು ದಿನದ 24 ಗಂಟೆಯೂ ಅವರ ಕಾಲೆಯೆಳೆಯುವ ಪ್ರಯತ್ನ ಮಾಡಬೇಡಿ. ಅವರನ್ನು ಟೀಕಿಸಿಬೇಡಿ. ಯಾಕೆಂದರೆ, ರಾಷ್ಟ್ರದ ಜನ ಬಹಳ ಜವಾಬ್ದಾರಿಯಿಂದ ಇದನ್ನೆಲ್ಲ ನೋಡುತ್ತಿದ್ದಾರೆಂಬುದನ್ನು ಮರೆಯಬೇಡಿ ಎಂದು ಪ್ರತಿಪಕ್ಷಗಳಿಗೆ ಹೇಳಿದರು.

ಇದನ್ನೂ ಓದಿ: PM Modi Speech In Rajya Sabha: ಜನ ಖರ್ಗೆಯನ್ನು ಸೋಲಿಸಿದರು ನಿಜ, ಆದರೆ ಮತ್ತೊಬ್ಬ ದಲಿತನನ್ನೇ ಗೆಲ್ಲಿಸಿದರು: ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬಸವೇಶ್ವರರ ಕಾಯಕವೈ ಕೈಲಾಸ ತತ್ವದಡಿ ರಾಷ್ಟ್ರದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಅವರ ಈ ಕಾಯಕವನ್ನು ನಾನು ತುಂಬು ಕಂಠದಿಂದ ಹೊಗಳುತ್ತೇನೆ ಎಂದ ಜಗ್ಗೇಶ್, ಇದೇ ಮೊದಲ ಬಾರಿಗೆ ತಮ್ಮೆದುರಿಗೆ ಮಾತನಾಡಲು ಅವಕಾಶ ಸಿಕ್ಕಿದೆ. ತುಂಬ ಖುಷಿಯಾಗುತ್ತಿದೆ ಎಂದು ರಾಜ್ಯ ಸಭಾ ಚೇರ್ಮನ್ ಜಗದೀಪ್ ಧನಕರ್ ಅವರಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್ ಅವರು, ನಿಮ್ಮ ಮಾತುಗಳು ಅದ್ಭುತವಾಗಿದ್ದವು ಎಂದರು.

Exit mobile version