Site icon Vistara News

ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಉಭಯ ಸದನಗಳ ಕಲಾಪ ಮುಂದೂಡಿಕೆ

Congress Protest

ನವ ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಿಂದ ಪ್ರಾರಂಭವಾಗಿದ್ದು, ಇಂದು ಎರಡನೇ ದಿನ. ಇಂದು ಕೂಡ ಬೆಳಗ್ಗೆ 11ಗಂಟೆಗೆ ಸರಿಯಾಗಿ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಕಲಾಪ ಪ್ರಾರಂಭವಾಗಿತ್ತು. ಆದರೆ ಅರ್ಧಗಂಟೆಯಲ್ಲಿ ಎರಡೂ ಸದನಗಳಲ್ಲಿನ ಕಲಾಪ ಮುಂದೂಡಲ್ಪಟ್ಟಿದೆ. ಕಾಂಗ್ರೆಸ್‌ ಮತ್ತು ಇತರ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ, ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ.

ಇಂದು ಬೆಳಗ್ಗೆಯಿಂದಲೂ ಕಾಂಗ್ರೆಸ್‌ ಸಂಸದರು ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳವನ್ನು ವಿರೋಧಿಸಿ ಸಂಸತ್‌ ಭವನದ ಹೊರಭಾಗ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಹಣದುಬ್ಬರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕಾರಣ, ಜಿಎಸ್‌ಟಿ ಏರಿಕೆ ಮೂಲಕ ಜನರಿಗೆ ನಿತ್ಯ ಬಳಕೆಯ ವಸ್ತುಗಳೂ ಕೈಗೆಟುಕದಂತಾಗಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕೂಡ ಪಾಲ್ಗೊಂಡಿದ್ದರು.

ರಾಜ್ಯಸಭೆಯಲ್ಲಿ ಏನಾಯ್ತು?
ಇಂದು ಬೆಳಗ್ಗೆ 11ಗಂಟೆಗೆ ರಾಜ್ಯಸಭೆಯಲ್ಲಿ ಕಲಾಪ ಪ್ರಾರಂಭವಾಯಿತು. ಸಾಮಾನ್ಯವಾಗಿ ಅಧಿವೇಶನಗಳಲ್ಲಿ ಯಾವ್ಯಾವ ದಿನ ಯಾವ ವಿಷಯದ ಚರ್ಚೆ ನಡೆಯಬೇಕು ಎಂದು ಮುಂಚಿತವಾಗಿ ಪಟ್ಟಿ ಮಾಡಿಲಾಗುತ್ತದೆ. ಆದರೆ ಇಂದು ರಾಜ್ಯಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೆ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ನೋಟಿಸ್‌ ಒಂದನ್ನು ಮಂಡನೆ ಮಾಡಿ, ಇಂದು ಕಲಾಪದಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು. ಅಧ್ಯಕ್ಷ ವೆಂಕಯ್ಯ ನಾಯ್ಡು ಅದನ್ನು ನಿರಾಕರಿಸಿದಾಗ ಗದ್ದಲ ಪ್ರಾರಂಭವಾಯಿತು. ಗಲಾಟೆ ಹೆಚ್ಚಾಗುತ್ತಿದ್ದಂತೆ ಕಲಾಪ ಮುಂದೂಡಲ್ಪಟ್ಟಿತು.

ಲೋಕಸಭೆಯಲ್ಲೂ ನಡೆದಿಲ್ಲ ಕಲಾಪ
ಲೋಕಸಭೆಯಲ್ಲೂ ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸಂಸದರು ಪ್ರತಿಭಟಿಸುತ್ತಲೇ ಸದನ ಪ್ರವೇಶ ಮಾಡಿದರು. ಬೆಲೆ ಏರಿಕೆ, ಹಣದುಬ್ಬರ ವಿರೋಧಿ ಘೋಷಣೆಗಳನ್ನು ಒಳಗೊಂಡ ಫಲಕಗಳನ್ನು ಸಂಸತ್‌ನೊಳಗೆ ಪ್ರದರ್ಶಿಸಿದರು. ಬೆಲೆ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟನೆ ಕೊಡಬೇಕು ಎಂದು ಹಠ ಹಿಡಿದರು.

ಆಗ ಸ್ಪೀಕರ್‌ ಓಂಬಿರ್ಲಾ ಕಟುವಾಗಿಯೇ ಪ್ರತಿಕ್ರಿಯೆ ನೀಡಿದರು. ʼಮೊದಲು ಸಂಸತ್ತಿನ ನಿಯಮಗಳನ್ನು ಸರಿಯಾಗಿ ಓದಿ. ಸದನದ ಒಳಗೆ ಯಾವುದೇ ಬ್ಯಾನರ್‌, ಪ್ರತಿಭಟನಾ ಫಲಕ ಪ್ರದರ್ಶನ ಮಾಡುವಂತಿಲ್ಲ ಎಂದು ನಿಯಮವಿದೆ. ಅದನ್ನು ನೀವು ಉಲ್ಲಂಘಿಸಿದ್ದೀರಿʼ ಎಂದು ಹೇಳಿದರು. ಕಾಂಗ್ರೆಸ್ಸಿಗರ ಗದ್ದಲ ಮಿತಿಮೀರಿದಾಗ ಮತ್ತಷ್ಟು ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ ಓಂ ಬಿರ್ಲಾ, ʼನೀವೆಲ್ಲ ಸಂಸತ್ತಿನ ಹೊರಗೆ ನಿಂತು ರೈತರ ಸಂಕಷ್ಟ, ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಿದ್ದೀರಿ. ಹಾಗಾದ ಮೇಲೆ ಅದೇ ವಿಷಯವನ್ನು ಸಂಸತ್ತಿನ ಒಳಗೆ ಚರ್ಚೆ ನಡೆಸಲು ಅವಕಾಶ ಕೊಡುವುದಿಲ್ಲʼ ಎಂದರು ಮತ್ತು ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಿದರು.

ಇದನ್ನೂ ಓದಿ: ಸಂಸತ್‌ ಭವನದ ಸಂಕೀರ್ಣದಲ್ಲಿ ಕರಪತ್ರ ಹಂಚುವಂತೆಯೂ ಇಲ್ಲ; ಇನ್ನೊಂದು ಹೊಸ ಆದೇಶ

Exit mobile version