Site icon Vistara News

ರಾಜ್ಯಸಭೆ ಚುನಾವಣೆ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಮುಳ್ಳಾಗಿದ್ದು ಕುಲ್‌ದೀಪ್‌ ಬಿಷ್ಣೋಯ್‌ ಸೇಡು !

Kuldeep Bishnoi

ನವದೆಹಲಿ: ರಾಜಸ್ಥಾನದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ಕಾಂಗ್ರೆಸ್‌ 3 ಸೀಟ್‌ಗಳನ್ನು ಗೆದ್ದಿದೆ. ಇದು ಪಕ್ಷದ ಪಾಲಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂಥ ಅನುಭವ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇರುವುದರಿಂದ ಫಲಿತಾಂಶ ನಿರೀಕ್ಷಿತವೂ ಹೌದು. ಆದರೆ ಇದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯಾಗುತ್ತಿರುವುದು ಹರಿಯಾಣದಲ್ಲಿ ಅಜಯ್‌ ಮಾಕನ್‌ ಸೋಲು. ಇವರು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಿಂದ ಕೂದಲೆಳೆ ಅಂತರದಲ್ಲಿ ಪರಾಭವಗೊಂಡ ಬಳಿಕ, ಕಾಂಗ್ರೆಸ್‌ನಲ್ಲಿ ಅಡ್ಡಮತದಾನ ನಡೆದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಹರಿಯಾಣದಲ್ಲಿ ಅಜಯ್‌ ಮೇಕನ್‌ ಪಾಲಿಗೆ ವಿಲನ್‌ ಆಗಿದ್ದು ಕಾಂಗ್ರೆಸ್‌ ನಾಯಕ ಕುಲ್‌ದೀಪ್‌ ಬಿಷ್ಣೋಯ್‌ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿದೆ ಮತ್ತು ಬಿಷ್ಣೋಯ್‌ ಮಾಡಿದ ಟ್ವೀಟ್‌ ಅದಕ್ಕೆ ಪುಷ್ಟಿ ನೀಡುತ್ತಿದೆ.

ಹರಿಯಾಣದಲ್ಲಿ ಕಾರ್ತಿಕೇಯ ಶರ್ಮಾ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಇವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಅಜಯ್‌ ಮಾಕನ್‌ 30 ಮತ ಗಳಿಸಿದ್ದರೂ ಒಂದು ಮತ ಅನರ್ಹಗೊಂಡಿದ್ದರಿಂದ ಸೋಲುವಂತಾಯಿತು. ಕುಲ್‌ದೀಪ್‌ ಬಿಷ್ಣೋಯ್‌ ಅಜಯ್‌ ಮಾಕನ್‌ಗೆ ಮತ ಹಾಕಿದ್ದರೂ ಅವರು ಗೆಲ್ಲುತ್ತಿದ್ದರು. ಆದರೆ ಬಿಷ್ಣೋಯ್‌ ಅವರಿಗೆ ಮತ ಹಾಕಲಿಲ್ಲ. ತನಗೆ ಕಾಂಗ್ರೆಸ್‌ ಹೈಕಮಾಂಡ್‌ ಮೇಲಿದ್ದ ಅಸಮಾಧಾನವನ್ನು ಈ ಮಾರ್ಗದಲ್ಲಿ ತೋರಿಸಿದ ಬಿಷ್ಣೋಯ್‌, ಬಳಿಕ ಅತ್ಯಂತ ಮಾರ್ಮಿಕವಾದ ಟ್ವೀಟ್‌ವೊಂದನ್ನೂ ಮಾಡಿದ್ದಾರೆ. ʼಹುತ್ತವನ್ನೇ ತುಳಿಯುವ ಸಾಮರ್ಥ್ಯ ಇರುವವನು ನಾನು. ಅಂದಮೇಲೆ, ನನ್ನನ್ನು ಹಾವಿರುವ ಅರಣ್ಯದಲ್ಲಿ ಬಿಟ್ಟು ಭಯಪಡಿಸುವ ತಂತ್ರವೇಕೆ?-ಶುಭ ಮುಂಜಾವುʼ ಬಿಷ್ಣೋಯಿ ಟ್ವಿಟರ್‌ನಲ್ಲಿ ಬರೆದ ಈ ಸಾಲುಗಳು ಹರಿಯಾಣದಲ್ಲಿ ಅಜಯ್‌ ಮೇಕನ್‌ ಸೋಲಿನ ಕತೆಯನ್ನು ಸ್ಪಷ್ಟವಾಗಿ ಹೇಳುತ್ತಿವೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ಮಹಾರಾಷ್ಟ್ರ, ಕರ್ನಾಟಕದಲ್ಲಿ ಗೆದ್ದು ಬೀಗಿದ ಬಿಜೆಪಿ, ಠಾಕ್ರೆ ಪಾಳೆಯಕ್ಕೆ ಮುಖಭಂಗ

ಬಿಷ್ಣೋಯ್‌ಗೆ ಏಕೆ ಇಂಥಾ ಮುನಿಸು?
ಅದಾಂಪುರದ ಕಾಂಗ್ರೆಸ್‌ ಶಾಸಕ ಕುಲದೀಪ್‌ ಬಿಷ್ಣೋಯ್‌ ಹರಿಯಾಣ ಕಾಂಗ್ರೆಸ್‌ ಅಧ್ಯಕ್ಷನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಈ ವಿಚಾರದಲ್ಲಿ ಅವರಿಗೆ ತೀವ್ರ ನಿರಾಸೆಯಾಗಿತ್ತು. ಕುಲದೀಪ್‌ ಬದಲಿಗೆ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾರ ಆಪ್ತ, ದಲಿತ ನಾಯಕ ಉದಯ್‌ ಭಾನ್‌ರನ್ನು ಹರಿಯಾಣ ಪ್ರದೇಶ ಸಮಿತಿ ಕಾಂಗ್ರೆಸ್‌ ಅಧ್ಯಕ್ಷನ ಸ್ಥಾನಕ್ಕೆ ಹೈಕಮಾಂಡ್‌ ನೇಮಕ ಮಾಡಿತ್ತು. ಇದಾಗಿದ್ದು ಏಪ್ರಿಲ್‌ನಲ್ಲಿ. ಆ ನೋವನ್ನು ಹಾಗೇ ಇಟ್ಟುಕೊಂಡು ಬಂದಿದ್ದ ಕುಲದೀಪ್‌ ಬಿಷ್ಣೋಯ್‌ ರಾಜ್ಯಸಭಾ ಚುನಾವಣೆಯಲ್ಲಿ ಹೊರಹಾಕಿದ್ದಾರೆ. ಅದೇನೇ ಇದ್ದರೂ ಅವರು ಮಾಡಿದ ಈ ಎಡವಟ್ಟು ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟು ಕೊಟ್ಟಿದೆ.

ಹೂಡಾ ಫ್ಯಾಮಿಲಿ ಬಗ್ಗೆ ಅಸಮಾಧಾನ
ಹರಿಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ಅವರ ಪುತ್ರ, ಸಂಸದ ದೀಪಿಂದರ್‌ ಸಿಂಗ್‌ ಹೂಡಾ ಬಗ್ಗೆ ಹಲವು ಕಾಂಗ್ರೆಸ್‌ ನಾಯಕರಿಗೆ ಅಸಮಾಧಾನವಿದೆ. ಜಾಟ್‌ ಸಮುದಾಯದ ನಾಯಕರಾದ ಇವರಿಗೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಸಿಗುತ್ತಿರುವ ಅತಿಹೆಚ್ಚು ಪ್ರಾಶಸ್ತ್ಯವೇ ಉಳಿದವರ ಕಣ್ಣುರಿಗೆ ಕಾರಣ ಎಂದರೂ ತಪ್ಪಾಗಲಾರದು. ಅದರಲ್ಲೂ ತನಗೆ ಕಾಂಗ್ರೆಸ್‌ ಅಧ್ಯಕ್ಷನ ಸ್ಥಾನ ಕೈತಪ್ಪಿದಾಗಿನಿಂದಲೂ ಕುಲ್‌ದೀಪ್‌ ಬಿಷ್ಣೋಯ್‌ ಹೂಡಾ ಕುಟುಂಬದ ಬಗ್ಗೆ ಬಹಿರಂಗವಾಗಿಯೇ ಬಂಡಾಯ ಎದ್ದಿದ್ದಾರೆ. ‘ಅಜಯ್‌ ಮಾಕನ್‌ ಈ ಸಲ ಗೆದ್ದೇ ಗೆಲ್ಲುತ್ತಾರೆ. ಅವರ ಗೆಲುವಿಗೆ ಬೇಕಾದಷ್ಟು ಮತ ನಮ್ಮಲ್ಲಿ ಇದೆʼ ಎಂದು ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ದೀಪಿಂದರ್‌ ಸಿಂಗ್‌ ಹೂಡಾ ತುಂಬ ಸಲ ಹೇಳಿಕೆ ನೀಡಿದ್ದರು. ಆದರೀಗ ಅವರ ನಂಬಿಕೆಯನ್ನು ಹುಸಿಗೊಳಿಸಿದ ಸಂತೋಷದಲ್ಲಿ ಕುಲದೀಪ್‌ ಬಿಷ್ಣೋಯಿ ಇದ್ದಾರೆ ಮತ್ತು ತಮ್ಮ ನಿರಾಸೆಗೆ ನವಿರಾಗಿ ಸೇಡು ತೀರಿಸಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ ಒಗ್ಗಟ್ಟಿನ ಗೆಲುವು !
ರಾಜಸ್ಥಾನ ಕಾಂಗ್ರೆಸ್‌ನಲ್ಲೂ ಭಿನ್ನಾಭಿಪ್ರಾಯವಿಲ್ಲ ಎಂದೇನೂ ಇಲ್ಲ. ಅಲ್ಲಿ ಸದ್ಯದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಸಚಿನ್‌ ಪೈಲಟ್‌ ಬಣ ಇದ್ದೇಇದೆ. ಅದರೆ ರಾಜ್ಯಸಭೆ ಚುನಾವಣೆಯಲ್ಲಿ ಅದು ಮುನ್ನೆಲೆಗೆ ಬರಲಿಲ್ಲ. ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪ್ರಮೋದ್‌ ತಿವಾರಿ, ಮುಕುಲ್‌ ವಾಸ್ನಿಕ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲಾ ಮೂವರೂ ಗೆದ್ದಿದ್ದಾರೆ. ಈ ಗೆಲುವು ಅಶೋಕ್‌ ಗೆಹ್ಲೋಟ್‌ ಪಾಲಿಗೆ ವರದಾನವೂ ಆಗಲಿದೆ. ರಾಜಸ್ಥಾನದಲ್ಲಿ ತನಗೆ ಮುಖ್ಯಮಂತ್ರಿ ಪಟ್ಟ ಕೊಡಿ ಎಂದು ಹೈಕಮಾಂಡ್‌ಗೆ ದಂಬಾಲು ಬಿದ್ದಿರುವ ಸಚಿನ್‌ ಪೈಲಟ್‌ ಆಸೆ ನೆರವೇರಲು ವಿಳಂಬವಾಗಬಹುದು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಎಲ್ಲ ಮೂರು ಅಭ್ಯರ್ಥಿಗಳ ಜಯಭೇರಿ, ಎಂವಿಎಗೆ 3 ಸೀಟು

Exit mobile version