Site icon Vistara News

ರಾಜ್ಯಸಭಾ ಚುನಾವಣೆ Updates: ಹನುಮಾನ್‌ ಚಾಲೀಸಾ ಪಠಿಸಿ ಮತ ಹಾಕಿದ ರಾಣಾ

ನವ ದೆಹಲಿ: ರಾಜ್ಯಸಭೆಯ 16 ಸ್ಥಾನಗಳಿಗಾಗಿ ನಾಲ್ಕು ರಾಜ್ಯಗಳಲ್ಲಿ ಮತದಾನ ನಡೆದಿದ್ದು, ಹಲವಾರು ಕುತೂಹಲಕಾರಿ ವಿದ್ಯಮಾನಗಳು ಜರಗಿವೆ. ಒಟ್ಟು 57 ಸ್ಥಾನಗಳ ಪೈಕಿ 41ಕ್ಕೆ ಅವಿರೋಧ ಆಯ್ಕೆ ನಡೆದಿದೆ. ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರಿಯಾಣಗಳ 16 ಸ್ಥಾನಗಳಿಗೆ ಮತದಾನ ನಡೆಯಿತು.

ಮತ ಹಾಕದ ಬಲರಾಂ ಕುಂಡು
ಹರಿಯಾಣದಲ್ಲಿ ಎರಡು ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದ್ದು, ಪಕ್ಷೇತರ ಶಾಸಕರಾಗಿರುವ ಬಲರಾಮ ಕುಂಡು ಅವರು ಮತದಾನದಿಂದ ಹೊರಗುಳಿದಿದ್ದಾರೆ. ಬಿಜೆಪಿ ಹಗರಣಗಳಿಂದ ತುಂಬಿ ಹೋಗಿದೆ, ಕಾಂಗ್ರೆಸ್‌ ಅಜಯ್‌ ಮಾಕೆನ್‌ ಅವರನ್ನು ಕಣಕ್ಕಿಳಿಸುವ ಮೂಲಕ ಸ್ಥಳೀಯರಿಗೆ ಅಪಮಾನ ಮಾಡಿದೆ. ಹಾಗಾಗಿ ಎರಡೂ ಪಕ್ಷಗಳನ್ನು ತಿರಸ್ಕರಿಸಿದ್ದೇನೆ ಎಂದು ಅವರು ಹೇಳಿದರು.

ಆರು ಸದಸ್ಯರ ಅನರ್ಹತೆ ವಿವಾದ
ರಾಜಸ್ಥಾನದಲ್ಲಿ ಅನರ್ಹತೆಗೆ ಒಳಗಾಗಿರುವ ಆರು ಮಂದಿ ಬಿಎಸ್‌ಪಿ ಶಾಸಕರಿಗೆ ಸಂಬಂಧಿಸಿದ ಅರ್ಜಿ ಇತ್ಯರ್ಥ ಆಗುವವರೆಗೆ ರಾಜ್ಯಸಭಾ ಚುನಾವಣೆ ಫಲಿತಾಂಶ ಘೋಷಣೆ ಮಾಡಬಾರದು ಎಂಬ ಮನವಿಯನ್ನು ರಾಜ್ಯ ಹೈಕೋರ್ಟ್‌ ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಮಹಾರಾಷ್ಟ್ರ: ಮೂರು ಮತಗಳಿಗೆ ಆಕ್ಷೇಪ
ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ವಿಕಾಸ ಅಗಾಡಿಗೆ ಸೇರಿದ ಮೂವರ ಮತಗಳಿಗೆ ಸಂಬಂಧಿಸಿ ಬಿಜೆಪಿ ಆಕ್ಷೇಪವೆತ್ತಿದೆ. ಕಾಂಗ್ರೆಸ್‌ನ ಯಶೋಮತಿ ಠಾಕೂರ್‌, ಎನ್‌ಸಿಪಿಯ ಜಿತೇಂದ್ರ ಅವ್ಹಾಡ್‌, ಶಿವಸೇನೆಯ ಸುಹಾಸ್‌ ಕಾಂಡೆ ಅವರ ಮತವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ. ಆದರೆ, ಚುನಾವಣಾ ಆಯೋಗ ಈ ಆಕ್ಷೇಪಕ್ಕೆ ಸೊಪ್ಪು ಹಾಕಿಲ್ಲ. ಮತಗಳು ಸಿಂಧು ಎಂದು ಘೋಷಿಸಿದೆ. ಈ ನಡುವೆ, ಸಚಿವ ನವಾಬ್‌ ಮಲ್ಲಿಕ್‌ ಹಾಗೂ ಅನಿಲ್‌ ದೇಶಮುಖ್‌ಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿಲ್ಲ.

ಮತಕ್ಕೆ ಮುನ್ನ ಹನುಮಾನ್‌ ಚಾಲೀಸಾ ಪಠಣ

ಮಸೀದಿಯಲ್ಲಿ ಆಜಾನ್‌ಗೆ ಪ್ರತಿಯಾಗಿ ಹನುಮಾನ್‌ ಚಾಲೀಸಾ ಪಠಣ ಮಾಡುವ ಮೂಲಕ ಭಾರಿ ಸುದ್ದಿ ಮಾಡಿದ ಮಹಾರಾಷ್ಟ್ರದ ನವನೀತ್‌ ರಾಣಾ ಅವರ ಪತಿ ಶಾಸಕ ರವಿ ರಾಣಾ ಅವರು 101 ಬಾರಿ ಹನುಮಾನ್‌ ಚಾಲೀಸಾ ಪಠಣ ಮಾಡಿದ ಬಳಿಕ ಹೋಗಿ ಮತ ಚಲಾಯಿಸಿದರು.

Exit mobile version