ಮುಂಬೈ: ಷೇರು ಮಾರುಕಟ್ಟೆಯ ಬಿಗ್ ಬುಲ್, ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಬಹುಕಾಲದಿಂದಲೂ ಅವರು ಡಯಾಬಿಟಿಸ್ನಿಂದ ಬಳಲುತ್ತಿದ್ದರು ಎಂದಷ್ಟೇ ಗೊತ್ತಾಗಿತ್ತು. ಆದರೆ ಅದರ ತೀವ್ರತೆ ಎಷ್ಟಿತ್ತು? ಏನೆಲ್ಲ ಆರೋಗ್ಯ ಸಮಸ್ಯೆಯಿತ್ತು ಎಂಬುದು ಸ್ಪಷ್ಟವಾಗಿರಲಿಲ್ಲ. ಇದೀಗ ಜುಂಜುನ್ವಾಲಾಗೆ ಚಿಕಿತ್ಸೆ ನೀಡುತ್ತಿದ್ದ, ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮದಾನಿ ಹೇಳಿಕೆ ನೀಡಿದ್ದಾರೆ. ರಾಕೇಶ್ ಜುಂಜುನ್ವಾಲಾ ಮೃತಪಟ್ಟ ನಂತರ ಮೊದಲ ಬಾರಿಗೆ ಆ ಆಸ್ಪತ್ರೆಯಿಂದ ಪ್ರಕಟಣೆ ಬಿಡುಗಡೆಯಾಗಿದೆ.
‘ರಾಕೇಶ್ ಜುಂಜುನ್ವಾಲಾ ಮೃತಪಟ್ಟಿದ್ದು ಹೃದಯ ಸ್ತಂಭನದಿಂದಲೇ ಹೌದು. ಆದರೆ ಅವರು ದೀರ್ಘಕಾಲದಿಂದಲೂ ಅನಾರೋಗ್ಯಕ್ಕೀಡಾಗಿದ್ದರು. ಅವರಿಗೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ತುಂಬ ಕಾಲದಿಂದಲೂ ನಿಯಮಿತವಾಗಿ ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಡಯಾಬಿಟಿಸ್ ಗಂಭೀರ ಸ್ವರೂಪದಲ್ಲಿಯೇ ಇತ್ತು. ಇತ್ತೀಚೆಗೆ ಹೃದಯ ಸಮಸ್ಯೆ ಶುರುವಾಗಿ, ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು’ ಎಂದು ಡಾ. ಪ್ರತೀತ್ ತಿಳಿಸಿದ್ದಾರೆ.
ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್ವಾಲಾ ಹುಟ್ಟಿದ್ದು 1960ರ ಜುಲೈ 5ರಂದು. ಮುಂಬೈನಲ್ಲಿಯೇ ಬೆಳೆದರು. 1985ರಲ್ಲಿ ಸೈಡನ್ಹ್ಯಾಮ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರ್ಪಡೆಯಾದರು. ಬಳಿಕ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಾಗಿದ್ದ ರೇಖಾ ಅವರನ್ನು ಮದುವೆಯಾದರು. ಇತ್ತೀಚೆಗೆಷ್ಟೇ ಹೊಸದಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟು, ಆಕಾಸ ಏರ್ಲೈನ್ ಪ್ರಾರಂಭ ಮಾಡಿದ್ದರು.
ಇದನ್ನೂ ಓದಿ: Rakesh Jhunjhunwala | ಸಾರಥಿಯ ನಿರ್ಗಮನಕ್ಕೆ ಆಕಾಸ ಏರ್ ಕಂಬನಿ, ಏರ್‌ಲೈನ್ಸ್ ಭವಿಷ್ಯವೇನು?