ಮುಂಬೈ: ಮದುವೆಯಾದ ಕೆಲವೇ ದಿನಗಳಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಅವರು ತಮ್ಮ ಪತಿ ಆದಿಲ್ ಖಾನ್ ದುರಾನಿ ಅವರಿಂದ ದೂರವಾಗುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಮದುವೆಯ ಕಾರಣದಿಂದಾಗಿ ಇಸ್ಲಾಂಗೆ ಮತಾಂತರಗೊಂಡು, ಬಳಿಕ ಪತಿಯ ವಿರುದ್ಧವೇ ಆರೋಪ ಮಾಡಿದ್ದ ರಾಖಿ ಸಾವಂತ್ ಅವರೀಗ ಪತಿಯಿಂದ ದೂರವಾಗುತ್ತಿದ್ದೇನೆ ಎಂದು ಘೋಷಿಸಿದ್ದಾರೆ.
“ಆದಿಲ್ ಖಾನ್ ಬೇರೆ ಯುವತಿ ಜತೆ ವಾಸಿಸುತ್ತಿದ್ದಾನೆ. ಅವಳಿಗೆ ನಾಚಿಕೆಯಾಗಬೇಕು. ಕೊನೆಗೂ ಆದಿಲ್ ನನ್ನನ್ನು ಬಿಟ್ಟಿದ್ದಾನೆ. ಇದಕ್ಕೂ ಮೊದಲು, ಆತನೇ ನನ್ನನ್ನು ಮಾಧ್ಯಮದವರ ಎದುರು ಕ್ಷಮೆಯಾಚಿಸುವಂತೆ ಮಾಡಿದ. ನಾನು ಕ್ಷಮೆಯಾಚಿಸಿದರೆ ಮಾತ್ರ ವಾಪಸ್ ಬರುತ್ತೇನೆ ಎಂದಿದ್ದ. ಹಾಗಾಗಿ, ಕ್ಷಮೆಯಾಚಿಸಿದ್ದೆ. ಆದರೀಗ, ಆತನೇ ನನ್ನಿಂದ ದೂರವಾಗಿದ್ದಾನೆ. ಈಗ ಎಲ್ಲವೂ ಮಾಧ್ಯಮದವರ ಎದುರು ಹೇಳುತ್ತಿದ್ದೇನೆ” ಎಂದು ತಿಳಿಸಿದರು.
ಇದಕ್ಕೂ ಮೊದಲು ಕೂಡ ರಾಖಿ ಸಾವಂತ್, ತಮ್ಮ ಪತಿ ವಿರುದ್ಧ ಆರೋಪ ಮಾಡಿದ್ದರು. “ನನ್ನ ಮದುವೆಯ ಜೀವನ ಅಪಾಯದಲ್ಲಿದೆ. ನಾನು ನನ್ನ ಜೀವನವನ್ನು ಫ್ರಿಡ್ಜ್‌ನಲ್ಲಿ ಅಂತ್ಯಗೊಳಿಸಲು (ಶ್ರದ್ಧಾ ವಾಳ್ಕರ್ ಹತ್ಯೆ ಉಲ್ಲೇಖಿಸಿ) ಇಷ್ಟವಿಲ್ಲ. ಆದಿಲ್ ಜತೆಗಿರುವ ಹುಡುಗಿಗೂ ಎಚ್ಚರಿಕೆ ನೀಡುತ್ತಿದ್ದೇನೆ. ಆದಿಲ್‌ಗೆ ತುಂಬ ಹೆಣ್ಣುಮಕ್ಕಳ ಜತೆ ಸಂಬಂಧವಿದೆ” ಎಂದು ಹೇಳಿದ್ದರು. ಈಗ ಕೊನೆಗೂ ಸಂಬಂಧ ಅಂತ್ಯವಾಗಿದೆ ಎಂದಿದ್ದಾರೆ. ಆದರೆ, ವಿಚ್ಛೇದನ ಪಡೆಯುವ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ.
ಕಳೆದ ಜನವರಿಯಲ್ಲಿ ರಾಖಿ ಸಾವಂತ್ ಅವರ ಮದುವೆ ಕುರಿತು ಭಾರಿ ಸುದ್ದಿಯಾಗಿತ್ತು. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜತೆ ಅವರು ಮದುವೆಯಾಗಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅವರು ಇಸ್ಲಾಂಗೂ ಮತಾಂತರಗೊಂಡಿದ್ದು, ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿ-ಪತ್ನಿ ದೂರವಾಗಿದ್ದಾರೆ.
ಇದನ್ನೂ ಓದಿ: Rakhi Sawant : ಪತಿ ಆದಿಲ್ ಅಕ್ರಮ ಸಂಬಂಧದ ಬಗ್ಗೆ ಸುಳಿವು ನೀಡಿದ ರಾಖಿ ಸಾವಂತ್: ಗಳಗಳನೆ ಅತ್ತ ನಟಿ