Site icon Vistara News

ಲಾಲು ಪ್ರಸಾದ್ ಯಾದವ್ ಮಗನಿಗೆ ಶ್ರೀರಾಮ ಕನಸಲ್ಲಿ ಬಂದು ಹೀಗೆ ಹೇಳಿದನಂತೆ!

Tej Pratap Yadav

Ram Came In My Dream And He Said: Tej Pratap Yadav On Big Ayodhya Ram Mandir Event

ಪಟನಾ: ಅಯೋಧ್ಯೆಯಲ್ಲಿ ನಿರ್ಮಿಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಯ ವಿಷಯವೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ರಾಮಮಂದಿರ ಲೋಕಾರ್ಪಣೆಗೆ ತೆರಳುವುದು, ತೆರಳದಿರುವುದು, ಇದು ಬಿಜೆಪಿಯ ಕಾರ್ಯಕ್ರಮ ಎಂದು ದೂರುವುದು, ಕಾಂಗ್ರೆಸ್‌ ಹಿಂದು ವಿರೋಧಿ ಎಂದು ಬಿಜೆಪಿ ನಾಯಕರು ತಿರುಗೇಟು ನೀಡುವುದು ಸಾಮಾನ್ಯ ಎಂಬಂತಾಗಿದೆ. ಇದರ ಬೆನ್ನಲ್ಲೇ, ಬಿಹಾರ ಸಚಿವ, ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರು ಭಗವಾನ್‌ ಶ್ರೀರಾಮನ ಕುರಿತು ಹೊಸ ಹೇಳಿಕೆ ನೀಡಿದ್ದಾರೆ. “ನನ್ನ ಕನಸಿನಲ್ಲಿ ಭಗವಾನ್‌ ಶ್ರೀರಾಮ ಬಂದಿದ್ದ. ನಾನು ಕೂಡ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂಬುದಾಗಿ ಹೇಳಿದ್ದಾನೆ” ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದೇನು?

“ಚುನಾವಣೆಗಳು ಮುಗಿದ ಬಳಿಕ ಭಗವಾನ್‌ ಶ್ರೀರಾಮನನ್ನು ಮರೆಯುತ್ತಾರೆ. ಜನವರಿ 22ರಂದೇ ಶ್ರೀರಾಮನು ರಾಮಮಂದಿರವನ್ನು ಪ್ರವೇಶಿಸುತ್ತಾನೆಯೇ? ಹಾಗಂತ ನಿಯಮಗಳೇನಾದರೂ ಇವೆಯೇ? ಭಗವಾನ್‌ ಶ್ರೀರಾಮನು ನಾಲ್ವರು ಶಂಕರಾಚಾರ್ಯರ ಕನಸಿನಲ್ಲಿ ಬಂದಿದ್ದಾನೆ. ಆತನು ನನ್ನ ಕನಸಿನಲ್ಲೂ ಬಂದಿದ್ದು, ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾನೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಪಟತನ ಇರುವುದರಿಂದ ಹೋಗುವುದಿಲ್ಲ ಎಂದು ಹೇಳಿದ್ದಾನೆ” ಎಂದು ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದಾರೆ.

ರಾಮ ಮಂದಿರದಲ್ಲಿ ನಡೆಯುತ್ತಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ, ಭಾರತದಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಅಮೆರಿಕದಲ್ಲಿಯೂ ಸಂಭ್ರಮ ಮೇಳೈಸಿದೆ. ಇಲ್ಲಿನ 10 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಬೃಹತ್‌ ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ಪ್ರಾಣ ಪ್ರತಿಷ್ಠೆಯ ನಿಮಿತ್ತವಾಗಿ ಪ್ರಪಂಚದಾದ್ಯಂತ ನೂರಾರು ಕಡೆ ಹಲವು ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತಿವೆ. ಅವುಗಳಲ್ಲಿ, ಅಮೆರಿಕದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಲ್ಲಿನ ಹಿಂದೂ ಸಮುದಾಯದ ಸಹಯೋಗದೊಂದಿಗೆ, 10 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಬಿಲ್‌ಬೋರ್ಡ್‌ಗಳನ್ನು ಸ್ಥಾಪಿಸಿದೆ. ಇದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯವಾದ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಕುರಿತ ಸಂದೇಶವನ್ನು ಪ್ರದರ್ಶಿಸುತ್ತಿವೆ.

ಇದನ್ನೂ ಓದಿ: Ayodhya Ram Mandir: ಪ್ರಾಣ ಪ್ರತಿಷ್ಠಾಪನೆಗೆ ಜ.22ನ್ನೇ ಆರಿಸಿಕೊಂಡಿದ್ದೇಕೆ? ಹೀಗಿದೆ ವಿಶೇಷ!ʼ

ಮತ್ತೊಂದೆಡೆ, ಭಾರತದ ಬಹುಸಂಖ್ಯಾತರ ಭಾವನೆಗೆ ಸ್ಪಂದಿಸಿರುವ ಮಾರಿಷಸ್‌ ಸರ್ಕಾರ ವಿಶಿಷ್ಟ ನಿರ್ಧಾರ ತೆಗೆದುಕೊಂಡಿದೆ. ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹಿಂದೂ ಸರ್ಕಾರಿ ನೌಕರರಿಗೆ 2 ಗಂಟೆಗಳ ವಿಶೇಷ ರಜೆಯನ್ನು ಘೋಷಿಸಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ವಿದೇಶಿ ಸರ್ಕಾರವೊಂದು ತನ್ನ ಉದ್ಯೋಗಿಗಳಿಗೆ ಸಾರ್ವಜನಿಕ ರಜೆ ಘೋಷಿಸಿರುವುದು ಇದೇ ಮೊದಲು. ಮಾರಿಷಸ್‌ನಲ್ಲಿ ಹಿಂದೂ ಧರ್ಮದ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ರಾಮಮಂದಿರದ ನಿರ್ಮಾಣವು ಅವರಿಗೆ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಹಾಗಾಗಿ, ಮಾರಿಷಸ್‌ ಸರ್ಕಾರವು ಶ್ಲಾಘನೀಯ ನಡೆ ಅನುಸರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version