Site icon Vistara News

Ram Mandir : “ತಪಸ್ವಿʼ ಮೋದಿಯಿಂದಾಗಿ ರಾಮ ಮರಳಿ ಬಂದಿದ್ದಾನೆ; ಮೋಹನ್​ ಭಾಗವತ್ ಶ್ಲಾಘನೆ​

Mohan Bhagwat

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ದೇವಸ್ಥಾನದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾಪನೆʼ ಸಮಾರಂಭದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​​ಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಪ್ರಧಾನಿ ಮೋದಿಯನ್ನು ತಪಸ್ವಿ ಎಂದು ಹೊಗಳುವ ಜತೆಗೆ ನವಭಾರತದ ಉದಯವಾಗಿದೆ ಎಂದು ಹೇಳಿದ್ದಾರೆ.

ಇಂದು ಅಯೋಧ್ಯೆಗೆ ರಾಮ ಬರುವ ಜತೆಗೆ ನೈಜ ಭಾರತದ ಆತ್ಮವು ಮರಳಿದೆ. ಯಾವುದೇ ಆಪತ್ತಿನ ಸಂದರ್ಭದಲ್ಲಿ ಇಡೀ ಜಗತ್ತಿಗೆ ಪರಿಹಾರ ನೀಡಲು ಭಾರತ ಸಿದ್ಧಗೊಂಡಿದೆ. ಇಲ್ಲಿಗೆ ಬರುವ ಮೊದಲು ಪ್ರಧಾನಿಯವರು ಕಠಿಣ ವ್ರತ ಮಾಡಿದ್ದರು ಎಂಬುದು ತಿಳಿದಿರುವ ವಿಚಾರ. ಅದು ಕಠಿಣಾತಿಕಠಿಣ ತಪಸ್ಸಾಗಿತ್ತು. ಮೋದಿಯವರ ಜತೆ ಹಲವು ವರ್ಷಗಳ ಸಂಪರ್ಕ ನನಗೆ ಇದೆ. ಅವರೊಬ್ಬರು ಮಹಾನ್ ತಪಸ್ವಿ. ಅವರಿಂದಾಗಿ ಇವೆಲ್ಲವೂ ಆಗಿದೆ. ಆದರೆ, ಅವರು ಏಕಾಂಗಿಯಾಗಿ ತಪಸ್ಸು ಮಾಡಿದರೆ ಸಾಲದು. ನಾವೆಲ್ಲರೂ ಕೈಲಾದಷ್ಟು ಕೆಲಸ ಮಾಡಬೇಕು ಎಂದು ಭಾಗವತ್​ ಹೇಳಿದ್ದಾರೆ.

ಇದನ್ನೂ ಓದಿ : Ayodhya Ram Mandir: “ಮಂದಿರವಲ್ಲೇ ಕಟ್ಟಿದೆವುʼ ಎಂದು ಹೆಮ್ಮೆಯಿಂದ ಹೇಳಿದ ಯೋಗಿ ಆದಿತ್ಯನಾಥ್

ಇಂದು 500 ವರ್ಷಗಳ ನಂತರ ರಾಮ್ ಲಲ್ಲಾ ಅಯೋಧ್ಯೆಗೆ ಮರಳಿದ್ದಾನೆ. ಎಲ್ಲರ ಪ್ರಯತ್ನದಿಂದಾಗಿ ನಾವು ಇಂದು ಈ ಸುವರ್ಣ ದಿನವನ್ನು ನೋಡುತ್ತಿದ್ದೇವೆ. ನಾವು ಎಲ್ಲರಿಗೂ ನಮ್ಮ ಅತ್ಯಂತ ಗೌರವವನ್ನು ಸಲ್ಲಿಸುತ್ತೇವೆ. ಈ ಯುಗದ ಇತಿಹಾಸವು ಎಷ್ಟು ಶಕ್ತಿಯನ್ನು ಹೊಂದಿದೆಯೆಂದರೆ, ರಾಮ್ ಲಲ್ಲಾ ನ ಕಥೆಗಳನ್ನು ಕೇಳುವವರ ಎಲ್ಲಾ ದುಃಖಗಳು ಮತ್ತು ನೋವುಗಳು ಅಳಿಸಿಹೋಗುತ್ತವೆ ಎಂದ ಆರ್​ಎಸ್​​ಎಸ್​ ಮುಖ್ಯಸ್ಥರು ಹೇಳಿದರು.

ಉತ್ತಮ ನಡವಳಿಕೆಯನ್ನು ಕಾಪಾಡಿಕೊಳ್ಳಲು ನಾವು ದೃಢವಾಗಿರಬೇಕು. ನಾವು ಕೂಡ ಎಲ್ಲಾ ಭಿನ್ನಾಭಿಪ್ರಾಯಗಳಿಗೆ ವಿದಾಯ ಹೇಳಬೇಕಾಗಿದೆ. ಸಣ್ಣ ಸಣ್ಣ ವಿಚಾರಕ್ಕೆ ಪರಸ್ಪರ ಭಿನ್ನಾಭಿಪ್ರಾಯಗಳು ಮತ್ತು ಸಣ್ಣ ವಿವಾದಗಳಿರುವುದು ಸಹಜ. ಆದರೆ ನಾವು ಸಮನ್ವಯದಿಂದ ಅವುಗಳನ್ನು ಸಾಗಿ ಬರಬೇಕು. ನಾವು ಎಲ್ಲರಿಗಾಗಿ ನಡೆಯಬೇಕು. ಸತ್ಯದ ನಡತೆ ಎಂದರೆ ಪರಸ್ಪರ ಸಮನ್ವಯದಿಂದ ವರ್ತಿಸುವುದು. ಸಹಾನುಭೂತಿ ಎರಡನೇ ಹಂತ. ಅಂದರೆ ಸೇವೆ ಮತ್ತು ದಯಾಪರತೆ ಎಂದು ಭಾಗವತ್​ ಸಾಮರಸ್ಯದ ಪಾಠ ಹೇಳಿದರು.

Exit mobile version