Site icon Vistara News

BB Lal | ರಾಮ ಜನ್ಮಭೂಮಿ ಉತ್ಖನನದ ರೂವಾರಿ, ಪದ್ಮ ವಿಭೂಷಣ ಬಿ ಬಿ ಲಾಲ್‌ ನಿಧನ

b b lal

ನವ ದೆಹಲಿ: ಭಾರತೀಯ ಪುರಾತತ್ತ್ವ ಸರ್ವೇಕ್ಷಣಾಲಯದ ಪ್ರಧಾನ ನಿರ್ದೇಶಕರಾಗಿದ್ದ, ಅಯೋಧ್ಯೆಯ ರಾಮಜನ್ಮ ಭೂಮಿ ಸ್ಥಳದಲ್ಲಿ ದೇವಾಲಯದ ಮಾದರಿಯ ರಚನೆಗಳು ಇವೆ (BB Lal) ಎಂದು ಎಪ್ಪತ್ತರ ದಶಕದಲ್ಲಿ ಪ್ರತಿಪಾದಿಸಿದ್ದ ಹಿರಿಯ ಪುರಾತತ್ತ್ವ ಶಾಸ್ತ್ರಜ್ಞರಾದ ಪ್ರೊ. ಬಿ ಬಿ ಲಾಲ್‌ ಅವರು ಶನಿವಾರ ನಿಧನರಾಗಿದ್ದಾರೆ. 2021ರಲ್ಲಿ ಅವರಿಗೆ ಅಂದಿನ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರು ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಸಂತಾಪ: ಶತಾಯುಷಿ ಆರ್ಕಿಯಾಲಜಿಸ್ಟ್ ಬಿ ಬಿ ಲಾಲ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನನ್ಯ ವ್ಯಕ್ತಿತ್ತ್ವದ ಬಿಬಿ ಲಾಲ್‌ ಅವರು ದೇಶದ ಸಂಸ್ಕೃತಿ ಮತ್ತು ಪುರಾತತ್ತ್ವ ವಲಯಕ್ಕೆ ಸಲ್ಲಿಸಿದ ಕೊಡುಗೆ ಅದ್ವಿತೀಯ. ಭಾರತದ ಶ್ರೀಮಂತ ಗತ ಪರಂಪರೆಯ ಬಗ್ಗೆ ಆಳವಾದ ಬೌದ್ಧಿಕ ಪರಿಜ್ಞಾನ ಅವರಿಗೆ ಇತ್ತು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರು, ಬಂಧು ಬಳಗದವರಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಯಾರಿವರು ಬಿ ಬಿ ಲಾಲ್?

‌ಬಿ ಬಿ ಲಾಲ್‌ ಅವರು 1969 ಮತ್ತು 1972ರ ಅವಧಿಯಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾಲಯದ (Archaeological Survey of India) ಪ್ರಧಾನ ನಿರ್ದೇಶಕರಾಗಿದ್ದರು. ಹರಪ್ಪ ನಾಗರಿಕತೆ ಮತ್ತು ಮಹಾಭಾರತದ ವಿದ್ಯಮಾನಗಳು ನಡೆದ ಐತಿಹಾಸಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಉತ್ಖನನ, ಸಂಶೋಧನೆ ನಡೆಸಿದ್ದರು. ಯುನೆಸ್ಕೊದ ಹಲವಾರು ಸಮಿತಿಗಳಲ್ಲಿ ಇದ್ದರು. 2000ರಲ್ಲಿ ಪದ್ಮಭೂಷಣ ಹಾಗೂ 2021ರಲ್ಲಿ ಪದ್ಮ ವಿಭೂಷಣ ಪರಸ್ಕೃತರಾಗಿದ್ದರು. ಅಯೋಧ್ಯೆಯ ವಿವಾದಿತ ಬಾಬ್ರಿ ಮಸೀದಿ ಸ್ಥಳದಲ್ಲಿ ದೇವಾಲಯವನ್ನು ಹೋಲುವ ರಚನೆಗಳು ಇವೆ ಎಂದು ಎಪ್ಪತ್ತರ ದಶಕದಲ್ಲಿ ಸಂಶೋಧನೆಗಳ ಮೂಲಕ ಅವರು ಪ್ರತಿಪಾದಿಸಿ ಗಮನ ಸೆಳೆದಿದ್ದರು.‌

ಲಾಲ್‌ ಅವರು 1921ರಲ್ಲಿ ಉತ್ತರಪ್ರದೇಶದ ಜಾನ್ಸಿಯಲ್ಲಿ ಜನಿಸಿದರು. ಪ್ರಸ್ತುತ ದಿಲ್ಲಿಯ ನಿವಾಸಿಯಾಗಿದ್ದರು. ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅವರಿಗೆ ಬಳಿಕ ಪುರಾತತ್ತ್ವ ವಿಷಯದಲ್ಲಿ ಅಪಾರ ಆಸಕ್ತಿ ಉಂಟಾಗಿತ್ತು. 1943ರಲ್ಲಿ ಹೆಸರಾಂತ ಬ್ರಿಟಿಷ್‌ ಆರ್ಕಿಯಾಲಜಿಸ್ಟ್‌ ಮೋರ್ಟಿಮರ್‌ ವ್ಹೀಲರ್‌ ನೇತೃತ್ವದಲ್ಲಿ ತಕ್ಷಶಿಲೆಯಲ್ಲಿ ನಡೆದ ಉತ್ಖನನ ಯೋಜನೆಯಲ್ಲಿ ಟ್ರೈನಿಯಾಗಿ ಸೇರಿದ್ದರು. 50ಕ್ಕೂ ಹೆಚ್ಚು ವರ್ಷಗಳಲ್ಲಿ ಲಾಲ್‌ ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸರಸ್ವತಿ ಫ್ಲೋಸ್‌ ಆನ್:‌ ದಿ ಕಂಟಿನ್ಯುಟಿ ಆಫ್‌ ಇಂಡಿಯನ್‌ ಕಲ್ಚರ್‌, (2002) ಮತ್ತು ರಾಮಾ, ಹಿಸ್‌ ಹಿಸ್ಟರಿ, ಮಂದಿರ್‌ & ಸೇತು: ಎವಿಡೆನ್ಸ್‌ ಆಫ್‌ ಲಿಟರೇಷರ್‌, ಆರ್ಕಿಯಾಲಜಿ & ಅದರ ಸೈನ್ಸ್‌ (2008) ಅವರ ಪ್ರಮುಖ ಕೃತಿ.

ಋಗ್ವೇದ ಕಾಲದ ಜನರೂ ಹರಪ್ಪ ನಾಗರಿಕತೆಯ ಜನರೂ ಒಂದೇ ಎಂದು ಲಾಲ್‌ ಹೇಳಿದ್ದರು. 1950 ಮತ್ತು 1952ರಲ್ಲಿ ಮಹಾಭಾರತದ ಘಟನೆಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಉತ್ಖನನ ನಡೆಸಿದರು. 1975ರಲ್ಲಿ ಹಸ್ತಿನಾಪುರ ಮತ್ತು ಅಯೋಧ್ಯೆಯ ಉತ್ಖನನದಲ್ಲಿ ಕಂಡು ಬಂದ ಅಂಶಗಳ ಬಗ್ಗೆ ಸಂಶೋಧನಾ ವರದಿಯನ್ನು ಬರೆದಿದ್ದರು.

ರಾಮ ಜನ್ಮಭೂಮಿ ಬಗ್ಗೆ ಲಾಲ್‌ ಅವರ ಸಂಶೋಧನೆ ಏನು?

ಮಹಾಭಾರತದ ಸ್ಥಳಗಳಲ್ಲಿ ಉತ್ಖನನ ನಡೆಸಿದ ಬಳಿಕ ಬಿ ಬಿ ಲಾಲ್‌ ಅವರು 1975ರಲ್ಲಿ ರಾಮಾಯಣ ನಡೆದ ಸ್ಥಳಗಳಲ್ಲಿ ಉತ್ಖನನ ಯೋಜನೆಯನ್ನು ಕೈಗೊಂಡರು. ಎಎಸ್‌ಐ, ಗ್ವಾಲಿಯರ್‌ನ ಜಿವಾಜಿ ಯೂನಿವರ್ಸಿಟಿ, ಉತ್ತರ ಪ್ರದೇಶದ ಆರ್ಕಿಯಾಲಜಿ ಇಲಾಖೆಯು ಯೋಜನೆಗೆ ಅನುದಾನದ ನೆರವು ನೀಡಿತ್ತು. 1975ರ ಮಾರ್ಚ್‌ 31ರಂದು ಅಯೋಧ್ಯೆಯಲ್ಲಿ ಉತ್ಖನನ ಆರಂಭವಾಗಿತ್ತು. ರಾಮಾಯಣಕ್ಕೆ ಸಂಬಂಧಿಸಿದ ತಾಣಗಳಾದ ಅಯೋಧ್ಯೆ, ಭಾರಧ್ವಾಜ ಆಶ್ರಮ, ನಂದಿಗ್ರಾಮ, ಚಿತ್ರಕೂಟ ಮತ್ತು ಶ್ರಿಂಗವೇರಪುರದಲ್ಲಿ ಉತ್ಖನನ ನಡೆದಿತ್ತು. 1990ರಲ್ಲಿ ಲಾಲ್‌ ಅವರು ತಮ್ಮ ಉತ್ಖನನಗಳ ಆಧಾರದಲ್ಲಿ ” ಆಧಾರ ಸ್ಥಂಭ ಥಿಯರಿʼ ಅನ್ನು ಪ್ರಕಟಿಸಿದರು. ಅದರಲ್ಲಿ, ಬಾಬ್ರಿ ಮಸೀದಿ ಕಟ್ಟಡದ ತಳಪಾಯದಲ್ಲಿ ದೇವಾಲಯದ ಸ್ತಂಭದ ಮಾದರಿಯ ರಚನೆಗಳು ಇವೆ ಎಂದು ತಿಳಿಸಿದ್ದರು. ಮಂಥನ್‌ ನಿಯತಕಾಲಿಕದಲ್ಲಿ ಲಾಲ್‌ ಅವರ ಸಂಶೋಧನೆಗಳು ಪ್ರಕಟವಾಗಿತ್ತು.

ಲಾಲ್‌ ಅವರು “ರಾಮಾ, ಇತಿಹಾಸ, ಮಂದಿರ ಮತ್ತು ಸೇತು: ಸಾಹಿತ್ಯ, ಆರ್ಕಿಯಾಲಜಿ ಮತ್ತು ಇತರ ವೈಜ್ಞಾನಿಕ ಸಾಕ್ಷ್ಯʼ ಸಂಶೋಧನಾ ವರದಿಯಲ್ಲಿ ವಿವಾದಿತ ಬಾಬ್ರಿ ಮಸೀದಿ ಕಟ್ಟಡದ ಸ್ಥಳದಲ್ಲಿ ಇರುವ ಹನ್ನೆರಡು ಸ್ತಂಭಗಳು ಹಿಂದೂ ದೇವತೆಗಳ ಆಕೃತಿಗಳನ್ನೂ ಒಳಗೊಂಡಿದೆ. ಇವುಗಳು ಮಸೀದಿಯ ಭಾಗವಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ. ಆದರೆ ಅವುಗಳನ್ನು ಕಡೆಗಣಿಸಲಾಗಿದೆʼʼ ಎಂದು ವಿವರಿಸಿದ್ದರು. 2002ರಲ್ಲಿ ಕೋರ್ಟ್‌ ಆದೇಶದ ಪ್ರಕಾರ ನಡೆದ ಉತ್ಖನನದ ವೇಳೆ ಈ ಅಂಶಗಳನ್ನು ಪರಿಗಣಿಸಲಾಯಿತು.

Exit mobile version