Site icon Vistara News

Ram Mandir: ರಾಮಲಲ್ಲಾ ವಿಗ್ರಹ ಬಾಲಕ ರಾಮನಂತೆ ಕಾಣುತ್ತಿಲ್ಲ ಎಂದ ದಿಗ್ವಿಜಯ್ ಸಿಂಗ್

Ram Lalla Idol doesnt look like child ram Says Digvijay Singh

ಭೋಪಾಲ್: ರಾಮ ಮಂದಿರದಲ್ಲಿ (Ram Mandir) ಪ್ರತಿಷ್ಠಾಪಿಸಲಾಗುತ್ತಿರುವ ರಾಮಲಲ್ಲಾ ವಿಗ್ರಹವು (Ram Lalla Idol) ಬಾಲಕ ರಾಮನಂತೆ ಕಾಣುತ್ತಿಲ್ಲ (Child Ram) ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijay Singh) ಹೇಳಿದ್ದಾರೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ (Pran Pratishta) ನಡೆಯಲಿರುವ ರಾಮ ಲಲ್ಲಾ ವಿಗ್ರಹವನ್ನು ಗರ್ಭ ಗುಡಿಯ ಪೀಠದಲ್ಲಿ ಗುರುವಾರ ಇರಿಸಲಾಯಿತು. ಈ ರಾಮ ಲಲ್ಲಾ ವಿಗ್ರಹದ ಫೋಟೋಗಳನ್ನು ಬಿಡುಗಡೆ ಮಾಡಲಾಗಿದ್ದು, ದಿಗ್ವಿಜಯ್ ಅವರು ಬಾಲಕ ರಾಮನನ್ನು ಈ ವಿಗ್ರಹ ಹೋಲುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಗುರುಗಳಾದ ದ್ವಾರಕಾ ಮತ್ತು ಜೋಶಿಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ ಮಹಾರಾಜ್ ಅವರು, ರಾಮ ಜನ್ಮಭೂಮಿ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹವು ಬಾಲಕ ರಾಮನಾಗಿರಬೇಕು ಮತ್ತು ತಾಯಿ ಕೌಶಲ್ಯಾ ಮಡಿಲಲ್ಲಿ ಇರುವಂತಿರಬೇಕು ಎಂದು ಸಲಹೆ ನೀಡಿದ್ದರು. ಆದರೆ, ಪ್ರತಿಷ್ಠಾಪನೆ ಮಾಡಲಾಗುತ್ತಿರುವ ವಿಗ್ರಹವು ಬಾಲಕ ರಾಮನ ರೀತಿಯಲ್ಲಿ ಕಾಣಿಸುತ್ತಿಲ್ಲ ಎಂದು ದಿಗ್ವಿಜಯ್ ಸಿಂಗ್ ಅವರು ಹೇಳಿದ್ದಾರೆ.

ವಿವಾದಕ್ಕೆ ಕಾರಣವಾದ ಮತ್ತು ನಾಶವಾಗಿದೆ ಎನ್ನಲಾದ ರಾಮ ಲಲ್ಲಾನ ವಿಗ್ರಹ ಎಲ್ಲಿದೆ? ಎರಡನೇ ರಾಮಲಲ್ಲಾನ ವಿಗ್ರಹವನ್ನು ಮತ್ತೆ ರೂಪಿಸುವುದು ಅಗತ್ಯ ಏನಿತ್ತು ಎಂದು ದಿಗ್ವಿಜಯ್ ಸಿಂಗ್ ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮೊದಲು ದಿಗ್ವಿಜಯ್ ಸಿಂಗ್ ಅವರಿಗೆ ರಾಮ ಮಂದಿರ ಉದ್ಘಾಟನೆಯ ಆಮಂತ್ರಣದ ಬಗ್ಗೆ ಪ್ರಶ್ನಿಸಿದಾಗ, ನನಗೆ ಆಮಂತ್ರಣ ಬೇಕಿಲ್ಲ. ಭಗವಾನ್ ಶ್ರೀರಾಮ್ ನಮ್ಮ ಹೃದಯಗಳಲ್ಲಿದ್ದಾನೆ. ಯಾವ ರಾಮ ಲಲ್ಲಾ ವಿಗ್ರಹಕ್ಕಾಗಿ ಬಿಕ್ಕಟ್ಟು ಸೃಷ್ಟಿಯಾಗಿತ್ತೋ ಆ ವಿಗ್ರಹ ಎಲ್ಲಿದೆ? ಆ ಹಳೆಯ ವಿಗ್ರಹವನ್ನು ಯಾಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿಲ್ಲ? ಹೊಸ ವಿಗ್ರಹವನ್ನು ಎಲ್ಲಿಂದ ತರಲಾಗುತ್ತಿದೆ ಮತ್ತು ಹೊಸ ವಿಗ್ರಹದ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದರು. ರಾಮ ಮಂದಿರದ ಗರ್ಭಗೃಹದ ಪೀಠದಲ್ಲಿ ಇರಿಸಲಾಗಿರುವ ರಾಮಲಲ್ಲಾ ವಿಗ್ರಹವನ್ನು ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿದ್ದಾರೆ.

ಕನ್ನಡಿಗ ಕೆತ್ತಿದ ರಾಮಲಲ್ಲಾ ಹೇಗಿದ್ದಾನೆ?

ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಕೆತ್ತಿದ ರಾಮಲಲ್ಲಾನ ಮೂರ್ತಿಯು (Ram Lalla Idol) ಅಯೋಧ್ಯೆಯ ರಾಮಮಂದಿರದ (Ram Mandir) ಗರ್ಭಗುಡಿ ಪ್ರವೇಶಿಸಿದೆ. ಪ್ರಾಣಪ್ರತಿಷ್ಠಾಪನೆಗೂ ಮುಂಚಿನ ವಿಧಿವಿಧಾನಗಳ ಭಾಗವಾಗಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಇರಿಸಲಾಗಿದೆ. ಈಗ ಇದೇ ಮೊದಲ ಬಾರಿಗೆ ರಾಮಲಲ್ಲಾ ಮೂರ್ತಿಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ರಾಮಲಲ್ಲಾನ ಮೂರ್ತಿಯನ್ನು ನೋಡಿದ ಭಕ್ತರು ಪುಳಕಿತರಾಗಿದ್ದಾರೆ.

ರಾಮಮಂದಿರದ ಗರ್ಭಗುಡಿಯಲ್ಲಿ ಶುಕ್ರವಾರ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದಾದ ಬಳಿಕ ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ನಡೆಯಲಿದೆ. ಹಾಗೆಯೇ, ವಿಶೇಷ ಹವನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ವಿಶೇಷ ಹವನ ಮಾಡಲಾಗುತ್ತದೆ. ಆ ಮೂಲಕ ರಾಮಮಂದಿರದ ಗರ್ಭಗುಡಿಯಲ್ಲಿ ಧಾರ್ಮಿಕ ವಾತಾವರಣ ಹಾಗೂ ಸಕಾರಾತ್ಮಕ ಅಂಶಗಳು ಒಡಮೂಡಲಿ ಎಂಬುದು ಅರ್ಚಕರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

First Pic Of Ram Lalla Installed At Ram Mandir In Ayodhya Revealed

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Ram Mandir: ‘ಪ್ರಾಣ ಪ್ರತಿಷ್ಠಾ’ ಆಹ್ವಾನ ಪಡೆದ ಆರ್​.ಅಶ್ವಿನ್​, ಮಿಥಾಲಿ ರಾಜ್​

Exit mobile version