ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದ (Ram Lalla) ಗರ್ಭಗುಡಿಯಲ್ಲಿ ಇರಿಸಲಾಗಿರುವ ಮಂದಸ್ಮಿತ ರಾಮಲಲ್ಲಾನ (Ram Lalla Idol) ಫೋಟೊ ವೈರಲ್ ಆಗಿದೆ. ಮುಗುಳು ನಗೆ ಬೀರುತ್ತಿರುವ ಬಾಲರಾಮನ ಫೋಟೊ ನೋಡಿ ಜನ ಪುಳಕಿತರಾಗಿದ್ದಾರೆ. ಇದರ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೊ ಅಸಲಿ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಪ್ರಾಣ ಪ್ರತಿಷ್ಠಾಪನೆ ಮುಗಿಯುವವರೆಗೆ ರಾಮಲಲ್ಲಾನ ಮುಖವನ್ನು ಅನಾವರಣಗೊಳಿಸುವುದಿಲ್ಲ. ರಾಮಲಲ್ಲಾನ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಪ್ರಾಣಪ್ರತಿಷ್ಠಾಪನೆ ಮುಗಿಯುವವರೆಗೆ ಬಟ್ಟೆ ಬಿಚ್ಚುವುದಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಂದಸ್ಮಿತ ರಾಮಲಲ್ಲಾನ ಫೋಟೊ ಅಸಲಿ ಅಲ್ಲ. ವೈರಲ್ ಆಗುತ್ತಿರುವ ಫೋಟೊದ ಕುರಿತು ತನಿಖೆಯಿಂದಲೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ” ಎಂದು ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡುವ ವೇಳೆ ಆಚಾರ್ಯ ಸತ್ಯೇಂದ್ರ ದಾಸ್ ಅವರು ಸ್ಪಷ್ಟಪಡಿಸಿದ್ದಾರೆ.
#WATCH | Ayodhya: On the idol of Lord Ram, Shri Ram Janmabhoomi Teerth Kshetra Chief Priest Acharya Satyendra Das says, "…The eyes of Lord Ram's idol cannot be revealed before Pran Pratishtha is completed. The idol where the eyes of Lord Ram can be seen is not the real idol. If… pic.twitter.com/I0FjRfCQRp
— ANI (@ANI) January 20, 2024
ರಾಮಮಂದಿರ ಉದ್ಘಾಟನೆ ದಿನ ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ದೇಶದ ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಕಚೇರಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠೆಯನ್ನು ಭಾರತದಾದ್ಯಂತ 22ನೇ ಜನವರಿ 2024ರಂದು ಆಚರಿಸಲಾಗುತ್ತದೆ. ಆಚರಣೆಯಲ್ಲಿ ಭಾಗವಹಿಸಲು ನೌಕರರನ್ನು ಸಕ್ರಿಯಗೊಳಿಸಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಮಧ್ಯಾಹ್ನ 12.40 ಗಂಟೆಯವರೆಗೆ ಅರ್ಧ ದಿನ ಮುಚ್ಚಲು ನಿರ್ಧರಿಸಲಾಗಿದೆ” ಎಂದು ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Arun Yogiraj: ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಹರಿಹರಪುರ ಶ್ರೀಗಳ ಆಶೀರ್ವಾದ
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ