Site icon Vistara News

Ram Mandir:‌ ನಗುಮೊಗದ ರಾಮಲಲ್ಲಾ, ನೀನೇ ಮನದ ತುಂಬೆಲ್ಲ; ಹೊಸ ಫೋಟೊ ಕಣ್ತುಂಬಿಕೊಳ್ಳಿ

Ram Lalla Face

Ram Lalla Idol Viral Photo Is Not Original: Says Ram Mandir chief priest Acharya Satyendra Das

ಅಯೋಧ್ಯೆ: ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಕೆತ್ತಿದ ರಾಮಲಲ್ಲಾನ ಮೂರ್ತಿಯು (Ram Lalla Idol) ಅಯೋಧ್ಯೆಯ ರಾಮಮಂದಿರದ (Ram Mandir) ಗರ್ಭಗುಡಿ ಪ್ರವೇಶಿಸಿದೆ. ಇದರ ಬೆನ್ನಲ್ಲೇ, ರಾಮಲಲ್ಲಾನ ನಗುಮೊಗದ ಫೋಟೊವನ್ನು ಅನಾವರಣಗೊಳಿಸಲಾಗಿದೆ. ಮಂದಸ್ಮಿತ ರಾಮಲಲ್ಲಾನ ಫೋಟೊವನ್ನು ನೋಡಿದ ಜನರ ಮನದುಂಬಿ ಬಂದಿದೆ. ಸಾಮಾಜಿಕ ಜಾಲತಾಣಗಲ್ಲಿ ರಾಮಲಲ್ಲಾನ ಫೋಟೊಗಳು ಭಾರಿ ವೈರಲ್‌ ಆಗಿವೆ.

ರಾಮಮಂದಿರದ ಗರ್ಭಗುಡಿಯಲ್ಲಿ ಶುಕ್ರವಾರ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಮಾಡಲಾಗಿದೆ. ಇದಾದ ಬಳಿಕ ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ನಡೆದಿದೆ.. ಹಾಗೆಯೇ, ವಿಶೇಷ ಹವನವನ್ನೂ ಮಾಡಲಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ವಿಶೇಷ ಹವನ ನೆರವೇರಿಸಲಾಗಿದೆ. ಆ ಮೂಲಕ ರಾಮಮಂದಿರದ ಗರ್ಭಗುಡಿಯಲ್ಲಿ ಧಾರ್ಮಿಕ ವಾತಾವರಣ ಹಾಗೂ ಸಕಾರಾತ್ಮಕ ಅಂಶಗಳು ಒಡಮೂಡಲಿ ಎಂಬುದು ಅರ್ಚಕರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್‌ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.

ಇದನ್ನೂ ಓದಿ: ಸಿಹಿಯಲ್ಲೇ ಮಂದಿರ ತಯಾರಿಸಿ ಅಯೋಧ್ಯೆಗೆ ಕೊಂಡೊಯ್ದ ಅರುಣ್‌ ಯೋಗಿರಾಜ್‌ ಕುಟುಂಬ!

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version