Site icon Vistara News

Ram Mandir: ಬಾಬರ್‌ ರಸ್ತೆಗೆ ಅಯೋಧ್ಯೆ ಮಾರ್ಗ ಎಂದು ಹೆಸರಿಟ್ಟ ಹಿಂದು ಕಾರ್ಯಕರ್ತರು!

Ayodhya Marg

Ram Mandir: Ayodhya Marg poster put on Babar Road signage in Delhi

ನವದೆಹಲಿ: ರಾಮಮಂದಿರ ನಿರ್ಮಿಸಲಾಗಿರುವ ಅಯೋಧ್ಯೆಯಲ್ಲಿ ಮಾತ್ರವಲ್ಲ, ದೇಶಾದ್ಯಂತ ರಾಮನ ಜಪ ಆರಂಭವಾಗಿದೆ. ಜನವರಿ 22ರಂದು ರಾಮಮಂದಿರ (Ram Mandir) ಉದ್ಘಾಟನೆಯಾಗಲಿದ್ದು, ಇದಕ್ಕಾಗಿ ಕೋಟ್ಯಂತರ ರಾಮಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿರುವ ಬಾಬರ್‌ ರಸ್ತೆಯ ಮಾರ್ಗಸೂಚಿ ಬೋರ್ಡ್‌ (Babar Road Signage) ಮೇಲೆ ಹಿಂದು ಕಾರ್ಯಕರ್ತರು ಅಯೋಧ್ಯೆ ಮಾರ್ಗ (Ayodhya Marg) ಎಂಬ ಪೋಸ್ಟರ್‌ ಅಂಟಿಸಿದ್ದಾರೆ.

ಬಾಬರ್‌ ರೋಡ್‌ ಸೈನ್‌ ಬೋರ್ಡ್‌ ಮೇಲೆ ಹಿಂದು ಸೇನಾ ಸಂಘಟನೆಯ ಕಾರ್ಯಕರ್ತರು ಅಯೋಧ್ಯೆ ಮಾರ್ಗ ಎಂಬುದಾಗಿ ಬರೆಯಲಾಗಿರುವ ಸೈನ್‌ ಬೋರ್ಡ್‌ ಅಂಟಿಸಿದ್ದಾರೆ. ಕೇಸರಿ ಸ್ಟಿಕ್ಕರ್‌ ಮೇಲೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಅಯೋಧ್ಯೆ ಮಾರ್ಗ ಎಂಬುದಾಗಿ ಬರೆಯಲಾಗಿದೆ. ಬಾಬರ್‌ ರೋಡ್‌ ಸೈನ್‌ ಬೋರ್ಡ್‌ ಮೇಲೆ ಪೋಸ್ಟರ್‌ ಅಂಟಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಅಧಿಕಾರಿಗಳು ಅಯೋಧ್ಯೆ ಮಾರ್ಗ ಎಂಬುದಾಗಿ ಬರೆದ ಪೋಸ್ಟರ್‌ ತೆರವುಗೊಳಿಸಿದ್ದಾರೆ.

ಹೆಸರು ಬದಲಿಸಲು ಆಗ್ರಹ

ಬಾಬರ್‌ ರೋಡ್‌ ಎಂಬ ಹೆಸರನ್ನು ಅಯೋಧ್ಯೆ ಮಾರ್ಗ ಎಂಬುದಾಗಿ ಬದಲಿಸಬೇಕು ಎಂದು ಹಿಂದು ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಆಗ್ರಹಿಸಿದ್ದಾರೆ. “ಬಾಬರ್‌ ರಸ್ತೆ ಎಂಬ ಹೆಸರನ್ನು ಬದಲಾಯಿಸಬೇಕು ಎಂಬುದಾಗಿ ಹಲವು ವರ್ಷಗಳಿಂದ ನಾವು ಆಗ್ರಹಿಸುತ್ತಿದ್ದೇವೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೂ ಪತ್ರ ಬರೆದಿದ್ದೇವೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅಯೋಧ್ಯೆಯಲ್ಲಿ ಬಾಬರ್‌ ನಿರ್ಮಿಸಿದ ಮಸೀದಿಯೇ ಇಲ್ಲ. ಆದರೆ, ದೆಹಲಿಯಲ್ಲಿ ಒಂದು ರಸ್ತೆ ಬಾಬರ್‌ ರೋಡ್‌ ಎಂಬ ಹೆಸರೇಕೆ ಇರಬೇಕು” ಎಂದು ಪ್ರಶ್ನಿಸಿದ್ದಾರೆ. ಅಯೋಧ್ಯೆ ಮಾರ್ಗ ಎಂಬುದಾಗಿ ಪೋಸ್ಟರ್‌ ಅಂಟಿಸಿರುವ ವಿಡಿಯೊವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Narendra Modi: ರಾಮನಿಗಾಗಿ ಮೋದಿ ನಿತ್ಯ 1 ಗಂಟೆ ವಿಶೇಷ ಮಂತ್ರ ಪಠಣ; ಏನದು?

ಮಂದಿರ ಉದ್ಘಾಟನೆ ದಿನ ರಜೆ ಹಾಕಿದರೆ ದಂಡ

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಆದರೆ, ಚಿಕ್ಕಮಗಳೂರಿನಲ್ಲಿರುವ ಕ್ರಿಶ್ಚಿಯನ್‌ ಶಾಲೆಯ ಆಡಳಿತ ಮಂಡಳಿಯು “ಜನವರಿ 22ರಂದು ಶಾಲೆಗೆ ರಜೆ ಹಾಕಿದರೆ 1 ಸಾವಿರ ರೂ. ದಂಡ ವಿಧಿಸುವುದಾಗಿ” ಘೊಷಿಸಿದೆ. ರಾಮಮಂದಿರ ಉದ್ಘಾಟನೆ ದಿನ ಯಾರೂ ಶಾಲೆಗೆ ರಜೆ ಹಾಕುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಸೋಮವಾರ ಶಾಲೆಗೆ ರಜೆ ಹಾಕಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಚಿಕ್ಕಮಗಳೂರು ನಗರದ ಸೆಂಟ್ ಜೋಸೆಫ್ ಶಾಲೆ ಆದೇಶ ಹೊರಡಿಸಿದೆ. ಮತ್ತೊಂದೆಡೆ, ಗೈರು ಹಾಜರಿಗೆ ದುಡ್ಡಿನ ದಂಡ ವಿಧಿಸುವ ಸೆಂಟ್ ಜೋಸೆಫ್ ಶಾಲೆ ವಿರುದ್ಧ ಬಜರಂಗದಳ, ವಿ.ಎಚ್.ಪಿ. ಪ್ರತಿಭಟನೆಗೆ ಇಳಿದಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version