Site icon Vistara News

Ram Mandir: ಮಂದಿರ ಉದ್ಘಾಟನೆವರೆಗೆ ಮುಸ್ಲಿಮರು ಮನೆಯಲ್ಲೇ ಇರಿ; ಸಂಸದ ಅಜ್ಮಲ್‌ ಕರೆ

Badruddin Ajmal

Ram Mandir: Badruddin Ajmal urges Muslims to stay home from January 20-25, BJP hits back

ಲಖನೌ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಪ್ರತಿಪಕ್ಷಗಳ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ರಾಮ ಮಾಂಸಾಹಾರಿಯಾಗಿದ್ದ ಎಂದು ಹೇಳಿದ್ದ ಎನ್‌ಸಿಪಿ ನಾಯಕ (ಶರದ್‌ ಪವಾರ್‌ ಬಣ) ನಾಯಕ ಜಿತೇಂದ್ರ ಅವ್ಹಾದ್‌ (Jitendra Awhad) ಬಳಿಕ ಕ್ಷಮೆಯಾಚಿಸಿದ್ದಾರೆ. ಜೆಡಿಯು ಸಂಸದ ಕೌಶಲೇಂದ್ರ ಕುಮಾರ್‌ (Kaushalendra Kumar) ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ತಿಥಿಗೆ ಹೋಲಿಸಿದ್ದಾರೆ. ಇದರ ಬೆನ್ನಲ್ಲೇ, ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (AIUDF) ಅಧ್ಯಕ್ಷ, ಸಂಸದ ಬದ್ರುದ್ದೀನ್‌ ಅಜ್ಮಲ್‌ (Badruddin Ajmal) ಅವರು ರಾಮಮಂದಿರ ಉದ್ಘಾಟನೆಯಾಗುವವರೆಗೆ ಮುಸ್ಲಿಮರು ಮನೆಯಲ್ಲೇ ಇರಬೇಕು ಎಂದು ಕರೆ ನೀಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

“ನಾವು ಮುಸ್ಲಿಮರೆಲ್ಲರೂ ತುಂಬ ಎಚ್ಚರದಿಂದ ಇರಬೇಕು. ಜನವರಿ 20ರಿಂದ 25ರವರೆಗೆ ಯಾರೂ ಹೆಚ್ಚು ಪ್ರಯಾಣ ಮಾಡಬಾರದು. ರಾಮಜನ್ಮಭೂಮಿಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವುದಕ್ಕೆ ಜಗತ್ತೇ ಸಾಕ್ಷಿಯಾಗುತ್ತದೆ. ಲಕ್ಷಾಂತರ ಜನ ಅಂದು ಬಸ್‌, ರೈಲು, ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಹಾಗಾಗಿ, ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು. ಮನೆಯಿಂದ ಹೊರಗೆ ಬರಬಾರದು. ಬಿಜೆಪಿಯು ನಮ್ಮ ಸಮುದಾಯದ ದೊಡ್ಡ ಶತ್ರು ಎಂಬುದನ್ನು ಯಾರು ಕೂಡ ಮರೆಯಬಾರದು” ಎಂದು ಅಸ್ಸಾಂನ ಬಾರ್ಪೆಟಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬದ್ರುದ್ದೀನ್‌ ಅಜ್ಮಲ್‌ ಹೇಳಿದ್ದಾರೆ. ಬದ್ರುದ್ದೀನ್‌ ಅಜ್ಮಲ್‌ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, “ಬಿಜೆಪಿಯು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ತತ್ವದಂತೆ ನಡೆದುಕೊಳ್ಳುತ್ತಿದೆ” ಎಂದಿದೆ.

ಅಯೋಧ್ಯೆಯಲ್ಲಿ ಹೈ ಸೆಕ್ಯುರಿಟಿ

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಲೋಕಾರ್ಪಣೆ; ಜ.22ಕ್ಕೆ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಸ್ಯಾಂಡಲ್‌ವುಡ್‌ನ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ರಾಮಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version