Site icon Vistara News

Ram Mandir | ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಅಯೋಧ್ಯೆ ರಾಮ ದೇಗುಲಕ್ಕೆ ಭಕ್ತರ ಪ್ರವೇಶ

ayodhya

ನವ ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ (Ram Mandir) ಗರ್ಭಗುಡಿ ನಿರ್ಮಾಣವು ಮುಂದಿನ ವರ್ಷ ಡಿಸೆಂಬರ್‌ಕ್ಕೆ ಪೂರ್ಣಗೊಳ್ಳಲಿದ್ದು, ಶೀಘ್ರವೇ ಸಾರ್ವಜನಿಕರಿಗೆ ರಾಮದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ರಾಮ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ದೇಗುಲದ ದೀರ್ಘ ಬಾಳಿಕೆಗಾಗಿ ನಾವು ಗ್ರಾನೈಟ್ ಸ್ಲ್ಯಾಬ್‌ಗಳನ್ನು ಬಳಸುತ್ತಿದ್ದೇವೆ. ಮಂದಿರ ನಿರ್ಮಾಣವು ವೇಳಾಪಟ್ಟಿಯಂತೆಯೇ ನಡೆಯುತ್ತಿದ್ದು, 2023ರ ಡಿಸೆಂಬರ್ ಹೊತ್ತಿಗೆ ಭಕ್ತರು ರಾಮದೇವರ ದರ್ಶನವನ್ನು ಪಡೆದುಕೊಳ್ಳಲು ಸಾಧ್ಯವಾಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ವೇಳೆಗಾಗಲೇ ಗರ್ಭ ಗುಡಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ನೃಪೇಂದ್ರ ಮಿಶ್ರಾ ಅವರು ಪ್ರಧಾನಿ ಮೋದಿ ಅವರಿಗೆ ಪ್ರಿನ್ಸಿಪಲ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಕ್ತರ ಒತ್ತಾಯದ ಮೇರೆಗೆ ಮಂದಿರ ನಿರ್ಮಾಣಕ್ಕೆ ಜೈಪುರದಲ್ಲಿ ದೊರೆಯುವ ಗುಲಾಬಿ ಸ್ಯಾಂಡ್ ಸ್ಟೋನ್‌ಗಳನ್ನು ಬಳಲಾಗುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಮಿಟಿಯನ್ನು ರಚಿಸುವ ಮೊದಲೇ ಅನೇಕ ಭಕ್ತರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಕಲ್ಲುಗಳನ್ನು ಸಂಗ್ರಹಿಸುವ ಕೆಲಸವನ್ನು ಆರಂಭಿಸಿದ್ದರು ಎಂದು ಅವರೂ ತಿಳಿಸಿದ್ದಾರೆ.

2025ರ ಹೊತ್ತಿಗೆ ಸಂಪೂರ್ಣ ರಾಮ ಮಂದಿರ ಸಂಕೀರ್ಣವು ಪೂರ್ತಿಯಾಗಲಿದೆ. 2020ರ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು. ಇತ್ತೀಚೆಗಷ್ಟೇ ಸಭೆ ಸೇರಿದ್ದ ಟ್ರಸ್ಟ್ ಸದಸ್ಯರು, ರಾಮ ಮಂದಿರ ನಿರ್ಮಾಣದ ವೆಚ್ಚ ಸುಮಾರು 1,800 ಕೋಟಿ ರೂ. ಆಗಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ | Ayodhya Ram Temple | ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂ. ವೆಚ್ಚ

Exit mobile version