ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಯಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗರ್ಭಗುಡಿಯಲ್ಲಿ ರಾಮಲಲ್ಲಾಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಇದಾದ ಬಳಿಕ ರಾಮಮಂದಿರಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಯಾದ 11 ದಿನಗಳಲ್ಲಿಯೇ ಸುಮಾರು 25 ಲಕ್ಷ ಜನ ಭೇಟಿ ನೀಡಿದ್ದು, ಇದುವರೆಗೆ 25 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ರಾಮಮಂದಿರ ಟ್ರಸ್ಟ್ ತಿಳಿಸಿದೆ.
“ರಾಮಮಂದಿರ ಆವರಣದಲ್ಲಿ ಸುಮಾರು 10 ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಕಾಣಿಕೆ ಹುಂಡಿಗಳ ಮೂಲಕವೇ 8 ಕೋಟಿ ರೂ. ಸಂಗ್ರಹವಾಗಿದೆ. ಆನ್‌ಲೈನ್ ಮೂಲಕ 3.5 ಕೋಟಿ ರೂ. ಸಂಗ್ರಹವಾಗಿದೆ. ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಪ್ರತಿ ದಿನ ಸರಾಸರಿ 2 ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಮಾಡುತ್ತಿದ್ದಾರೆ. ಕಾಣಿಕೆಯ ಹಣವನ್ನು ಲೆಕ್ಕ ಹಾಕಲು 11 ಬ್ಯಾಂಕ್ ಉದ್ಯೋಗಿಗಳು ಸೇರಿ 14 ಮಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕಣ್ಗಾವಲಿನಲ್ಲಿಯೇ ಎಲ್ಲ ಪ್ರಕ್ರಿಯೆ ನಡೆಯಲಿದೆ” ಎಂದು ರಾಮಮಂದಿರ ಟ್ರಸ್ಟ್ ಮಾಹಿತಿ ನೀಡಿದೆ.
ಫೆ.15ರಿಂದ ಎರಡನೇ ಹಂತದ ಕಾಮಗಾರಿ ಆರಂಭ
“ರಾಮಮಂದಿರದ ಮೊದಲನೇ ಮಹಡಿಯ ನಿರ್ಮಾಣ ಭಾಗಶಃ ಮುಕ್ತಾಯಗೊಂಡಿದೆ. ಎರಡನೇ ಮಹಡಿ ಹಾಗೂ ಗೋಪುರ ನಿರ್ಮಾಣದ ಕಾಮಗಾರಿ ಬಾಕಿ ಇದೆ. ಫೆಬ್ರವರಿ 15ರಿಂದ ಕಾಮಗಾರಿ ಆರಂಭವಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ” ಎಂದು ರಾಮಮಂದಿರ ಟ್ರಸ್ಟ್‌ನ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ. ರಾಮಮಂದಿರ ಆವರಣದಲ್ಲಿ ಎರಡನೇ ಹಂತದ ಕಾಮಗಾರಿಗಾಗಿ ಎರಡು ಟವರ್ ಕ್ರೇನ್‌ಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಫೆಬ್ರವರಿ 15ರಿಂದ ಸುಮಾರು 3,500 ಕಾರ್ಮಿಕರು, ಸಿಬ್ಬಂದಿಯು ನಿರ್ಮಾಣ ಕಾರ್ಯ ಆರಂಭಿಸಲಿದ್ದಾರೆ.
ಇದನ್ನೂ ಓದಿ: ISIS Threat: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಹಿಂದುಗಳ ಹತ್ಯೆಗೆ ಐಸಿಸ್ ಸ್ಕೆಚ್!
ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇದರ ಭಾಗವಾಗಿ ಕನಿಷ್ಠ 13 ಹೊಸ ದೇವಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಆರು ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು ಏಳು ಹೊರಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ ಮಾಹಿತಿ ನೀಡಿ, ಮುಖ್ಯ ದೇವಾಲಯವನ್ನು ಪೂರ್ಣಗೊಳಿಸುವ ಕಾಮಗಾರಿ ಸೇರಿದಂತೆ ಎಲ್ಲ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ