Site icon Vistara News

ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇಬ್ಬರು ಕರಸೇವಕರ ಸಹೋದರಿಗೆ ಆಹ್ವಾನ!

Poornima Kothari

Ram Mandir Invitation Sent To Poornima Kothari Whose Brothers Sacrificed Life For Temple

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಇದಕ್ಕಾಗಿ ದೇಶದ ಸಾವಿರಾರು ಗಣ್ಯರು, ಸಾಧು-ಸಂತರು, ಸಾಧಕರು, ಕರ ಸೇವಕರನ್ನು ಆಹ್ವಾನಿಸಲಾಗುತ್ತಿದೆ. ಅದರಲ್ಲೂ, 1990ರಲ್ಲಿ ನಡೆದ ರಾಮಮಂದಿರ ಹೋರಾಟದ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ರಾಮ್‌ ಕುಮಾರ್‌ ಕೊಠಾರಿ ಹಾಗೂ ಶರದ್‌ ಕುಮಾರ್‌ ಕೊಠಾರಿ ಎಂಬ ಇಬ್ಬರು ಕರಸೇವಕರ ಸಹೋದರಿಯಾದ ಪೂರ್ಣಿಮಾ ಕೊಠಾರಿ (Purnima Kothari) ಅವರಿಗೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ನೀಡಲಾಗಿದೆ. ಇದರಿಂದಾಗಿ ಪೂರ್ಣಿಮಾ ಕೊಠಾರಿ ಅವರಿಗೆ ಭಾರಿ ಸಂತಸವಾಗಿದೆ.

ಅಂದು ನಡೆದಿದ್ದೇನು?

“ಸಹೋದರರಿಬ್ಬರು ಬನಾರಸ್‌ನಿಂದ ಅಯೋಧ್ಯೆಯವರೆಗೆ ನಡೆದುಕೊಂಡು ಹೋದರು. ಮೊದಲ ದಿನ ಅವರು ಎಲ್ಲ ಭದ್ರತೆಯನ್ನು ತೂರಿ ಬಾಬರಿ ಮಸೀದಿಯ ಒಳಗೆ ಹೋಗಿ ಕೇಸರಿ ಧ್ವಜವನ್ನು ನೆಟ್ಟರು. ಆದರೆ ಮರುದಿನದ ಪತ್ರಿಕೆಗಳಲ್ಲಿ, ಕರಸೇವಕರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ವರದಿ ಪ್ರಕಟವಾಗಿತ್ತು. ಇದು ಇಬ್ಬರನ್ನು ಬಹಳ ಕಾಡಿತ್ತು. ಹೀಗಾಗಿ ಅವರು ಎರಡನೇ ಬಾರಿಗೆ ಒಳ ಹೋಗಲು ನಿರ್ಧರಿಸಿದರು. ಈ ಬಾರಿ ಹಿಂಸಾಚಾರ ನಡೆಯಿತು. ಮೊದಲು ಸಹೋದರರಿಬ್ಬರೂ ಅಡಗಿದ್ದರು. ಆದರೆ ಯಾರೋ ಅಳುತ್ತಿರುವುದನ್ನು ಕೇಳಿ ಹೊರಗೆ ಬಂದಾಗ ಅವರ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಯಿತುʼʼ ಎಂದು ಪೂರ್ಣಿಮಾ ಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

“ಸಂಘದ ಹಿರಿಯರು ಬಂದು ನಮ್ಮನ್ನು ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಸಹೋದರರ ತ್ಯಾಗವು ವ್ಯರ್ಥವಾಗುವುದಿಲ್ಲ ಎಂದು ನಮಗೆ ತಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸಿದಾಗ ಸಹೋದರರು ಮೇಲಿನಿಂದ ಸಂತಸ ಪಡಲಿದ್ದಾರೆʼʼ ಎಂದು ಅವರು ಭಾವುಕರಾಗಿ ಹೇಳುತ್ತಾರೆ.

ಪೂರ್ಣಿಮಾ ಸದ್ಯ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ತಮ್ಮ ಪುತ್ರಿಯ ಜತೆಗೆ ಕೋಲ್ಕತ್ತಾದಿಂದ ಅಯೋಧ್ಯೆಗೆ ತೆರಳಿದ್ದಾರೆ. ಜನವರಿ 23ರ ತನಕ ಅವರು ಅಲ್ಲೇ ನೆಲೆಸಲಿದ್ದಾರೆ. ಪೂರ್ಣಿಮಾ ಅವರ ಪೋಷಕರು ತಮ್ಮ ಇಬ್ಬರು ಪುತ್ರರು ಅಯೋಧ್ಯೆ ದೇವಾಲಯ ಚಳವಳಿಗಾಗಿ ಪ್ರಾಣ ಅರ್ಪಿಸಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮ ಸಹೋದರರ ನೆನಪಿಗಾಗಿ ಪೂರ್ಣಿಮಾ ಪ್ರತಿ ದೀಪಾವಳಿಯಂದು ಅಯೋಧ್ಯೆಗೆ ತೆರಳುತ್ತಾರೆ.

ಪೂರ್ಣಿಮಾ ಅವರ ಮನೆಯಲ್ಲಿ ರಾಮ್ ಮತ್ತು ಶರದ್ ಅವರ ನೆನಪೇ ತುಂಬಿಕೊಂಡಿದೆ. ಪ್ರತಿಯೊಬ್ಬರ ತ್ಯಾಗದ ಫಲವಾಗಿ ರಾಮ ಮಂದಿರ ಕನಸು ನನಸಾಗುತ್ತಿದೆ ಎಂದು ಅವರು ಹೇಳುತ್ತಾರೆ. ಜತೆಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುವುದನ್ನು ಮರೆಯುವುದಿಲ್ಲ. ʼʼಮೋದಿ ಅವರ ಪ್ರಾಮಾಣಿಕ ಪ್ರಯತ್ನವು ಅಯೋಧ್ಯೆಯಲ್ಲಿ ರಾಮ ಮಂದಿರ ಕನಸು ನನಸಾಗಲು ಕಾರಣವಾಗಿದೆʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Uttara Kannada News: ಬನವಾಸಿಯಲ್ಲಿ ಕಲಾವಿದನಿಂದ ನೀರಿನ ಮೇಲೆ ಶ್ರೀರಾಮಮಂದಿರ ಚಿತ್ರ

1990ರ ನವೆಂಬರ್ 2ರಂದು ಅಯೋಧ್ಯೆಯಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ರಾಮ್ ಮತ್ತು ಶರದ್ ಮೃತಪಟ್ಟಿದ್ದರು. 1990ರಲ್ಲಿ ನಡೆದ ರಾಮ ರಥ ಯಾತ್ರೆಯನ್ನು ಪಾಲ್ಗೊಂಡಿದ್ದ ಅವರು ಬಾಬರಿ ಕಟ್ಟಡದ ಮೇಲೆ ಕೇಸರಿ ಧ್ವಜವನ್ನು ನೆಟ್ಟಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version